ವಲಸೆ ನಿರ್ಬಂಧಿಸಲು ವೀಸಾ ನಿಯಮಗಳ ಬದಲಾವಣೆಗೆ ಮುಂದಾದ ಬ್ರಿಟನ್

ಸಾಂದರ್ಭಿಕ ಚಿತ್ರ
ಲಂಡನ್: ಬ್ರಿಟನ್ ನಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ವಲಸಿಗ ಕಾರ್ಮಿಕರ ಸಂಖ್ಯೆಯನ್ನು ತಗ್ಗಿಸುವ ಕ್ರಮವಾಗಿ ವೀಸಾ ಮತ್ತು ವಲಸೆ ಕಾನೂನುಗಳಿಗೆ ಮಹತ್ವವ ಬದಲಾವಣೆಗಳನ್ನು ತರಲು ಬ್ರಿಟಿಶ್ ಸರಕಾರ ಯೋಚಿಸುತ್ತಿದೆ.
ಪ್ರಸ್ತಾವಿತ ಬದಲಾವಣೆಗಳು ಜಾರಿಗೆ ಬಂದರೆ ಭಾರತೀಯರು ಸೇರಿದಂತೆ ಬ್ರಿಟನ್ ನಲ್ಲಿ ಕೆಲಸ ಮಾಡುವ ಮತ್ತು ಅಲ್ಲಿ ಶಾಶ್ವತವಾಗಿ ನೆಲೆಸುವ ಕನಸು ಕಂಡಿರುವ ವಲಸಿಗರಿಗೆ ಅದನ್ನು ಈಡೇರಿಸುವುದು ತುಂಬಾ ಕಷ್ಟವಾಗಲಿದೆ.
ವಲಸೆ ಕುರಿತ ಶ್ವೇತಪತ್ರವನ್ನು ಸೋಮವಾರ ಸಂಸತ್ನಲ್ಲಿ ಮಂಡಿಸುವ ಮುನ್ನ, ಕೇರ್ ಸ್ಟಾರ್ಮರ್ ನೇತೃತ್ವದ ಬ್ರಿಟನ್ ಸರಕಾರವು ರವಿವಾರ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದ ಬದಲಾವಣೆಗಳನ್ನು ಜಾರಿಗೆ ತರುವುದಾಗಿ ಪ್ರಕಟಿಸಿದೆ.
ಬ್ರಿಟನ್ ನಲ್ಲಿ 2024 ಜೂನ್ವರೆಗಿನ 12 ತಿಂಗಳ ಅವಧಿಯಲ್ಲಿ 7,28,000 ವಲಸಿಗರು ಬ್ರಿಟನ್ ಗೆ ಆಗಮಿಸಿದ್ದರು.
ಹೊಸ ನಿಯಮಗಳು ಜಾರಿಗೆ ಬಂದರೆ ವಲಸೆ ವ್ಯವಸ್ಥೆಯ ಮೇಲಿನ ಸರಕಾರದ ನಿಯಂತ್ರಣವು ಬಲಗೊಳ್ಳುತ್ತದೆ ಎಂದು ಪ್ರಧಾನಿ ಸ್ಟಾರ್ಮರ್ ಹೇಳಿದ್ದಾರೆ. ಬ್ರಿಟನ್ ಗೆ ಅರ್ಥಪೂರ್ಣ ರೀತಿಯಲ್ಲಿ ದೇಣಿಗೆ ನೀಡಬಲ್ಲವರು ಮಾತ್ರ ದೇಶದಲ್ಲಿ ಇರುವಂತೆ ಈ ವ್ಯವಸ್ಥೆಯು ನೋಡಿಕೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.





