ಒಪೆಕ್ ತೈಲ ಬೆಲೆಗಳನ್ನು ಇಳಿಸಿದರೆ ಉಕ್ರೇನ್ ಯುದ್ಧ ಅಂತ್ಯವಾಗುತ್ತದೆ: ಟ್ರಂಪ್

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಸೌದಿ ಅರೆಬಿಯಾ ಹಾಗೂ ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ(ಒಪೆಕ್) ತೈಲ ಬೆಲೆಗಳನ್ನು ಇಳಿಸಿದರೆ ಉಕ್ರೇನ್ ಯುದ್ಧ ತಕ್ಷಣ ಅಂತ್ಯಗೊಳ್ಳುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ದಾವೋಸ್ನಲ್ಲಿ ನಡೆಯುತ್ತಿರುವ ಜಾಗತಿಕ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಉಲ್ಲೇಖಿಸಿ ವರ್ಚುವಲ್ ವೇದಿಕೆಯ ಮೂಲಕ ಮಾತನಾಡಿದ ಟ್ರಂಪ್ `ಹೆಚ್ಚಿನ ತೈಲ ಬೆಲೆಗಳನ್ನು ಕಾಯ್ದುಕೊಳ್ಳುವ ಮೂಲಕ ಸೌದಿ ಅರೆಬಿಯಾ ಹಾಗೂ ಒಪೆಕ್ ಉಕ್ರೇನ್ನಲ್ಲಿ ರಶ್ಯದ ಮಿಲಿಟರಿ ಆಕ್ರಮಣ ಮುಂದುವರಿಯಲು ನೆರವಾಗಿದೆ' ಎಂದು ಆರೋಪಿಸಿದರು.
ಸೌದಿ ಅರೆಬಿಯಾ ಹಾಗೂ ಒಪೆಕ್ ತೈಲದ ಬೆಲೆಯನ್ನು ಕಡಿಮೆಗೊಳಿಸಿದರೆ ರಶ್ಯ-ಉಕ್ರೇನ್ ಯುದ್ಧ ತಕ್ಷಣ ಅಂತ್ಯಗೊಳ್ಳುತ್ತದೆ ಎಂದವರು ಹೇಳಿದ್ದಾರೆ.
ವಿಶ್ವದ ಅತ್ಯಧಿಕ ತೈಲ ರಫ್ತುದಾರರಲ್ಲಿ ಒಂದಾದ ರಶ್ಯವು ತನ್ನ ಯುದ್ಧದ ವೆಚ್ಚಕ್ಕೆ ತೈಲ ಆದಾಯವನ್ನು ಅವಲಂಬಿಸಿದೆ. ವರದಿಗಳ ಪ್ರಕಾರ, ತೈಲ ದರ ಕನಿಷ್ಠ ಮಟ್ಟಕ್ಕೆ ಕುಸಿಯುವುದನ್ನು ತಡೆಯಲು ಪ್ರತೀ ದಿನ ಸೌದಿ ಅರೆಬಿಯಾ ಹಾಗೂ ರಶ್ಯ(ಒಪೆಕ್ + ಸದಸ್ಯ) ಮಾರುಕಟ್ಟೆಯಿಂದ 2.2 ದಶಲಕ್ಷ ಬ್ಯಾರೆಲ್ ತೈಲವನ್ನು ತಡೆಹಿಡಿಯುತ್ತಿವೆ.
ತೈಲ ಉತ್ಪಾದನೆ ಕುರಿತ ಸೌದಿ ಅರೆಬಿಯಾ ಮತ್ತು ಒಪೆಕ್ನ ನಿರ್ಧಾರಗಳು ಉಕ್ರೇನ್ ನಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸಿವೆ ಎಂದು ಟ್ರಂಪ್ ವಾದಿಸಿದ್ದಾರೆ. ಅವರು (ಸೌದಿ ಮತ್ತು ರಶ್ಯ) ಇದನ್ನು ಈ ಹಿಂದೆಯೇ ಮಾಡಬೇಕಿತ್ತು. ಉಕ್ರೇನ್ನಲ್ಲಿ ನಡೆಯುತ್ತಿರುವುದಕ್ಕೆ ಒಂದು ನಿರ್ದಿಷ್ಟ ಮಟ್ಟಿಗೆ ಇವರೂ ಜವಾಬ್ದಾರರು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ತೈಲ ಬೆಲೆ ಕುಸಿದಾಗ ವಿಶ್ವದಾದ್ಯಂತದ ಸೆಂಟ್ರಲ್ ಬ್ಯಾಂಕ್ಗಳು ಬಡ್ಡಿದರವನ್ನೂ ಕಡಿಮೆಗೊಳಿಸಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ. ಟ್ರಂಪ್ ಹೇಳಿಕೆಯ ಬಳಿಕ ಕಚ್ಛಾತೈಲದ ದರದಲ್ಲಿ 1% ಇಳಿಕೆಯಾಗಿದೆ ಎಂದು ವರದಿಯಾಗಿದೆ.







