30 ದಿನಗಳ ಯುದ್ಧವಿರಾಮ ಪ್ರಸ್ತಾಪಕ್ಕೆ ಉಕ್ರೇನ್ ಬೆಂಬಲ
ಉಕ್ರೇನ್ಗೆ ಮಿಲಿಟರಿ ನೆರವಿನ ಮೇಲಿನ ನಿರ್ಬಂಧ ಸಡಿಲಿಸಿದ ಅಮೆರಿಕ

Photo | AFP
ರಿಯಾದ್: ಗಮನಾರ್ಹ ಬೆಳವಣಿಗೆಯೊಂದರಲ್ಲಿ ರಶ್ಯದೊಂದಿಗೆ 30 ದಿನಗಳ ಸಾಮಾನ್ಯ ಕದನ ವಿರಾಮಕ್ಕಾಗಿ ಅಮೆರಿಕ ಮುಂದಿರಿಸಿದ ಪ್ರಸ್ತಾಪವನ್ನು ಉಕ್ರೇನ್ ಬೆಂಬಲಿಸಿದ್ದು ಇದಕ್ಕೆ ಪ್ರತಿಯಾಗಿ ಉಕ್ರೇನ್ಗೆ ಮಿಲಿಟರಿ ನೆರವು ಮತ್ತು ಗುಪ್ತಚರ ಮಾಹಿತಿ ಹಂಚಿಕೆಯ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಿಸುವುದಾಗಿ ಅಮೆರಿಕ ಘೋಷಿಸಿದೆ.
ಸೌದಿ ಅರೆಬಿಯಾದಲ್ಲಿ ಉಕ್ರೇನ್ ಮತ್ತು ಅಮೆರಿಕದ ನಿಯೋಗದ ನಡುವಿನ ಮಾತುಕತೆಯ ಬಳಿಕ ಎರಡೂ ಕಡೆಯವರು `ಉಕ್ರೇನ್ನ ಖನಿಜ ಸಂಪನ್ಮೂಲಗಳ ಕುರಿತ ಒಪ್ಪಂದವನ್ನು ಆದಷ್ಟು ಬೇಗ' ಮುಕ್ತಾಯಗೊಳಿಸಲು ಒಪ್ಪಿದ್ದಾರೆ ಎಂದು ಜಂಟಿ ಹೇಳಿಕೆ ತಿಳಿಸಿದೆ. ಶಾಂತಿಯ ಕಡೆಗೆ ಅರ್ಥಪೂರ್ಣ ಪ್ರಗತಿಯನ್ನು ಸಾಧ್ಯವಾಗಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್, ಅಮೆರಿಕ ಸಂಸತ್ತು ಮತ್ತು ಅಮೆರಿಕದ ಜನರಿಗೆ ಉಕ್ರೇನ್ನ ನಿಯೋಗವು ಬಲವಾದ ಕೃತಜ್ಞತೆಯನ್ನು ಪುನರುಚ್ಚರಿಸಿದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.
ತಕ್ಷಣ 30 ದಿನಗಳ ಮಧ್ಯಂತರ ಕದನ ವಿರಾಮವನ್ನು(ಬಳಿಕ ಪರಸ್ಪರ ಒಪ್ಪಂದದಿಂದ ವಿಸ್ತರಿಸಬಹುದಾದ) ಜಾರಿಗೆ ತರುವ ಅಮೆರಿಕದ ಪ್ರಸ್ತಾಪವನ್ನು ಸ್ವೀಕರಿಸಲು ಉಕ್ರೇನ್ ಸಿದ್ಧವಾಗಿದೆ. ಈ ಪ್ರಸ್ತಾಪವು ರಶ್ಯದ ಸಮ್ಮತಿಯ ಬಳಿಕ ಜಾರಿಗೆ ಬರಲಿದೆ. ಶಾಂತಿ ಪ್ರಕ್ರಿಯೆಯ ಭಾಗವಾಗಿ ಮಾನವೀಯ ನೆರವಿನ ಪ್ರಯತ್ನಗಳ ಮಹತ್ವವನ್ನೂ, ವಿಶೇಷವಾಗಿ ಕದನ ವಿರಾಮದ ಸಮಯದಲ್ಲಿ, ನಿಯೋಗಗಳು ಚರ್ಚಿಸಿದವು. ಯುದ್ಧಕೈದಿಗಳ ವಿನಿಮಯ, ನಾಗರಿಕ ಬಂಧಿತರ ಬಿಡುಗಡೆ, ಬಲವಂತವಾಗಿ ವರ್ಗಾವಣೆಗೊಂಡ ಉಕ್ರೇನ್ನ ಮಕ್ಕಳನ್ನು ಹಿಂದಿರುಗಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ತಕ್ಷಣದಿಂದಲೇ ಅಮೆರಿಕವು ಉಕ್ರೇನ್ಗೆ ಮಿಲಿಟರಿ ನೆರವು ಮತ್ತು ಗುಪ್ತಚರ ಮಾಹಿತಿ ಹಂಚಿಕೆಯನ್ನು ಪುನರಾರಂಭಿಸುತ್ತದೆ ಎಂದು ಅಮೆರಿಕದ ನಿಯೋಗ ಹೇಳಿದೆ. ಸೌದಿ ಅರೆಬಿಯಾದಲ್ಲಿ ನಡೆದ ಮಾತುಕತೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಝೆಲೆನ್ಸ್ಕಿ `ಉಕ್ರೇನ್ ಶಾಂತಿಯನ್ನು ಬಯಸುತ್ತದೆ. ಯುದ್ಧ ಮುಂದುವರಿಯಲು ರಶ್ಯವೇ ಕಾರಣವಾಗಿದೆ' ಎಂದರು.