ಪುಟಿನ್ ನಿವಾಸವನ್ನು ಗುರಿಯಾಗಿಸಿ ಉಕ್ರೇನ್ನಿಂದ ಡ್ರೋನ್ ದಾಳಿ ಯತ್ನ: ರಷ್ಯಾ ಆರೋಪ

ವ್ಲಾದಿಮಿರ್ ಪುಟಿನ್ | Photo Credit : AP \ PTI
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸರಕಾರಿ ನಿವಾಸವನ್ನು ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ ನಡೆಸಲು ಯತ್ನಿಸಿದೆ ಎಂದು ರಷ್ಯಾ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಪ್ರತೀಕಾರದ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ರಷ್ಯಾ ನೀಡಿದೆ.
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸೋಮವಾರ ಹೇಳಿಕೆ ನೀಡಿದ್ದು, ಡಿಸೆಂಬರ್ 28 ಮತ್ತು 29ರಂದು ನವ್ಗೊರೊಡ್ ಪ್ರದೇಶದಲ್ಲಿರುವ ಅಧ್ಯಕ್ಷರ ಸರಕಾರಿ ನಿವಾಸದ ಮೇಲೆ ಉಕ್ರೇನ್ 91 ದೀರ್ಘಶ್ರೇಣಿಯ ಡ್ರೋನ್ ಗಳ ಮೂಲಕ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ. ಈ ಎಲ್ಲ ಡ್ರೋನ್ ಗಳನ್ನು ರಷ್ಯಾದ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ನಾಶಪಡಿಸಿದೆ ಎಂದು ಅವರು ಹೇಳಿದ್ದಾರೆ.
“ಇಂತಹ ಅಜಾಗರೂಕ ಮತ್ತು ಪ್ರಚೋದನಾತ್ಮಕ ಕ್ರಮಗಳಿಗೆ ಉತ್ತರ ನೀಡದೇ ಇರಲು ಸಾಧ್ಯವಿಲ್ಲ. ಈ ದಾಳಿ ರಾಜ್ಯ ಭಯೋತ್ಪಾದನೆಯ ಸ್ವರೂಪ ಹೊಂದಿದೆ,” ಎಂದು ಲಾವ್ರೊವ್ ಹೇಳಿದ್ದಾರೆ. ರಷ್ಯಾದ ಸಶಸ್ತ್ರ ಪಡೆಗಳಿಂದ ಪ್ರತೀಕಾರದ ದಾಳಿಗೆ ಅಗತ್ಯ ಗುರಿಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳ ನಡುವೆಯೇ ಈ ದಾಳಿ ನಡೆದಿದೆ ಎಂದು ಲಾವ್ರೊವ್ ಗಮನ ಸೆಳೆದಿದ್ದಾರೆ. ರಷ್ಯಾ ಮಾತುಕತೆಗಳನ್ನು ಸಂಪೂರ್ಣವಾಗಿ ತ್ಯಜಿಸುವುದಿಲ್ಲ, ಆದರೆ ಮಾಸ್ಕೋದ ನಿಲುವನ್ನು ಮರುಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ರಷ್ಯಾದ ಆರೋಪಗಳನ್ನು ತಳ್ಳಿಹಾಕಿದ್ದು, ಕೈವ್ ನಲ್ಲಿರುವ ಸರಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಮಾಸ್ಕೋ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ದಾಳಿ ನಡೆದ ಸಮಯದಲ್ಲಿ ಅಧ್ಯಕ್ಷ ಪುಟಿನ್ ಅವರು ಅಧಿಕೃತ ನಿವಾಸದಲ್ಲಿದ್ದರೋ ಇಲ್ಲವೋ ಎಂಬುದರ ಬಗ್ಗೆ ತಕ್ಷಣಕ್ಕೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.







