Ukraine | ರಷ್ಯಾದ ವೈಮಾನಿಕ ದಾಳಿಯಲ್ಲಿ 12 ಮಂದಿ ಮೃತ್ಯು

Photo Credit : NDTV
ಕೀವ್, ಜ.28: ಮಂಗಳವಾರ ತಡರಾತ್ರಿ ಉಕ್ರೇನ್ ನ ಇಂಧನ ಮೂಲಸೌಕರ್ಯ ಮತ್ತು ಪ್ರಯಾಣಿಕರ ರೈಲನ್ನು ಗುರಿಯಾಗಿಸಿಕೊಂಡು ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಈಶಾನ್ಯ ಖಾರ್ಕಿವ್ ಪ್ರದೇಶದಲ್ಲಿ ಸುಮಾರು 200 ಪ್ರಯಾಣಿಕರಿದ್ದ ರೈಲಿನ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಕನಿಷ್ಠ 5 ಪ್ರಯಾಣಿಕರು ಮೃತಪಟ್ಟಿದ್ದಾರೆ. ರೈಲಿನ ಕೆಲವು ಬೋಗಿಗಳು ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ ಎಂದು ಉಕ್ರೇನ್ ಪ್ರಧಾನಿ ಯೂಲಿಯಾ ಸ್ವೈರಿಡೆಂಕೋ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಕ್ಷಿಣದ ಒಡೆಸಾ ನಗರದ ಮೇಲೆ ರಷ್ಯಾ 50ಕ್ಕೂ ಹೆಚ್ಚು ಡ್ರೋನ್ಗಳನ್ನು ಪ್ರಯೋಗಿಸಿದ್ದು, ಮೂವರು ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹತ್ತುಕ್ಕೂ ಹೆಚ್ಚು ಕಟ್ಟಡಗಳು, ಚರ್ಚ್, ಶಿಶುವಿಹಾರ ಮತ್ತು ಶಾಲೆಗಳಿಗೆ ಹಾನಿಯಾಗಿದೆ. ಇಂಧನ ಮೂಲಸೌಕರ್ಯವನ್ನೂ ಗುರಿಯಾಗಿಸಿಕೊಂಡು ದಾಳಿ ನಡೆದಿರುವುದರಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಲೊವಿಯಾಂಸ್ಕ್ ನಗರದಲ್ಲಿ ದಂಪತಿ, ಝಪೋರಿಝಿಯಾ ಪ್ರದೇಶದಲ್ಲಿ ವೃದ್ಧೆ ಸೇರಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.







