ಉಕ್ರೇನ್: ರಷ್ಯಾದ ದಾಳಿಯಲ್ಲಿ 5 ಸಾವು; 8 ಮಂದಿಗೆ ಗಾಯ

Photo Credit : AP, PTI
ಕೀವ್, ಜೂ.22: ಉಕ್ರೇನ್ ನ ಹಲವೆಡೆ ಸೋಮವಾರ ರಷ್ಯಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, ಇತರ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನ ಸುಮಿ ಪ್ರದೇಶದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ 13 ವರ್ಷದ ಬಾಲಕ, ಆತನ ತಂದೆ ಮತ್ತು ಅಜ್ಜಿ ಸಾವನ್ನಪ್ಪಿದ್ದಾರೆ. ಬಾಲಕನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರು ಗಾಯಗೊಂಡಿದ್ದಾರೆ.
ಝಪೋರಿಜಿಯಾದಲ್ಲಿ ಡ್ರೋನ್ ದಾಳಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ದಕ್ಷಿಣದ ಒಡೆಸಾ ಪ್ರದೇಶದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.
ಕೃಷಿ ಸೌಲಭ್ಯದ ಮೇಲೆ ದಾಳಿ ನಡೆದ ನಂತರ ವಾಹನಗಳು ಮತ್ತು ಇಂಧನ ಸಂಗ್ರಹಣಾ ಟ್ಯಾಂಕ್ಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ.
ಮತ್ತೊಂದೆಡೆ, ಪನಾಮ ಧ್ವಜದಡಿ ಸಂಚರಿಸುತ್ತಿದ್ದ ಟರ್ಕಿಯ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದ್ದು, ಈಜಿಪ್ಟ್ನ ಪ್ರಜೆ ಸಾವನ್ನಪ್ಪಿದ್ದಾರೆ. ಟರ್ಕಿ ಹಾಗೂ ಭಾರತೀಯ ಪ್ರಜೆಗಳು ಸೇರಿದಂತೆ ಇತರ ಎಂಟು ಸಿಬ್ಬಂದಿಯನ್ನು ಲೈಫ್ಬೋಟ್ ಮೂಲಕ ಸ್ಥಳಾಂತರಗೊಳಿಸಲಾಗಿದೆ ಎಂದು ವರದಿಯಾಗಿದೆ.
ಈ ಮಧ್ಯೆ, ರವಿವಾರ ತಡರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ ರಷ್ಯಾದ ರಕ್ಷಣಾ ಪಡೆಗಳು ಉಕ್ರೇನ್ನ 311 ಡ್ರೋನ್ಗಳನ್ನು ಹೊಡೆದುರುಳಿಸಿವೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.






