ಉಕ್ರೇನ್ ದಾಳಿ: ಕ್ರಿಮಿಯಾದಲ್ಲಿ ನೀರು, ವಿದ್ಯುತ್ ಪೂರೈಕೆ ಸ್ಥಗಿತ

Photo Credit : PTI
ಮಾಸ್ಕೊ, ಅ.24: ಶನಿವಾರ ಉಕ್ರೇನ್ ನಡೆಸಿದ ದಾಳಿಯಿಂದ ರಶ್ಯ ಆಕ್ರಮಿತ ಕ್ರಿಮಿಯಾದಲ್ಲಿ ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ರಶ್ಯದ ಆಗ್ನೇಯ ಭಾಗದಲ್ಲಿಯೂ ಡ್ರೋನ್ ದಾಳಿಗಳು ನಡೆದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
‘ನಮ್ಮ ಪ್ರದೇಶದ ಹೊರಗಿನ ಮುಖ್ಯ ವಿದ್ಯುತ್ ಗ್ರಿಡ್ ಅನ್ನು ಗುರಿಯಾಗಿಸಿಕೊಂಡು ಶತ್ರುಗಳು ಡ್ರೋನ್ ಬಳಸಿ ನಡೆಸಿದ ದಾಳಿಯ ಪರಿಣಾಮವಾಗಿ ವಿದ್ಯುತ್ ಮತ್ತು ನೀರಿನ ಪೂರೈಕೆಗೆ ನಿರ್ಬಂಧ ವಿಧಿಸಲಾಗಿದೆ’ ಎಂದು ರಶ್ಯ ನೇಮಿಸಿರುವ ಕ್ರಿಮಿಯಾ ಪರ್ಯಾಯ ದ್ವೀಪದ ಮುಖ್ಯಸ್ಥ ಸೆರ್ಗೆಯ್ ಅಕ್ಸಿಯೊನೊವ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ರಿಮಿಯಾದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. 2014ರಲ್ಲಿ ರಶ್ಯ ವಶಪಡಿಸಿಕೊಂಡ ಈ ಪರ್ಯಾಯ ದ್ವೀಪವು ಉಕ್ರೇನ್ ದಾಳಿಗಳಿಗೆ ನಿರಂತರ ಗುರಿಯಾಗಿದೆ.
ಶುಕ್ರವಾರ ತಡರಾತ್ರಿ ದೇಶದ 20ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಒಟ್ಟು 616 ಉಕ್ರೇನ್ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಬಿದ್ದ ಡ್ರೋನ್ಗಳ ಅವಶೇಷಗಳಿಂದ ಹಲವರು ಗಾಯಗೊಂಡಿದ್ದು, ಬೆಂಕಿಯೂ ಕಾಣಿಸಿಕೊಂಡಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ವರದಿ ಮಾಡಿದೆ.
ಇದೇ ವೇಳೆ, ಶುಕ್ರವಾರ ರಾತ್ರಿ ರಶ್ಯವು ಉಕ್ರೇನ್ ಮೇಲೆ ಕನಿಷ್ಠ 126 ಡ್ರೋನ್ಗಳನ್ನು ಉಡಾಯಿಸಿದ್ದು, ಅವುಗಳಲ್ಲಿ 101 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ರಾಜಧಾನಿ ಕೀವ್ನಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.






