ರಶ್ಯ ಸೇನೆಯ ಸಾರಿಗೆ ವಿಮಾನ ನಾಶಗೊಳಿಸಿದ ಉಕ್ರೇನ್

ಸಾಂದರ್ಭಿಕ ಚಿತ್ರ | PC : NDTV
ಕೀವ್ : ರಶ್ಯಾ ಭೂಪ್ರದೇಶದ ಒಳಗಿರುವ ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ರಶ್ಯ ಸೇನೆಯ ಸಾರಿಗೆ ವಿಮಾನವನ್ನು ತನ್ನ ಪಡೆಗಳು ನಾಶಗೊಳಿಸಿವೆ ಎಂದು ಉಕ್ರೇನ್ ಸೋಮವಾರ ಹೇಳಿದೆ.
ಉಕ್ರೇನ್ ಗಡಿಭಾಗದಿಂದ ಸುಮಾರು 1000 ಕಿ.ಮೀ ದೂರದಲ್ಲಿರುವ ಒರೆನ್ಬರ್ಗ್ ಪ್ರದೇಶದಲ್ಲಿರುವ ಮಿಲಿಟರಿ ವಾಯುನೆಲೆಯಲ್ಲಿ ನಿಲ್ಲಿಸಿದ್ದ ಟಿಯು-134 ಸಾರಿಗೆ ವಿಮಾನವನ್ನು ನಾಶಗೊಳಿಸಲಾಗಿದೆ. ಸೋವಿಯತ್ ಯುಗದಲ್ಲಿ ನಿರ್ಮಿಸಲ್ಪಟ್ಟಿರುವ ಈ ಯುದ್ಧವಿಮಾನಗಳು ರಶ್ಯ ರಕ್ಷಣಾ ಇಲಾಖೆಯ ಅಧಿಕಾರಿಗಳ ಪ್ರಯಾಣಕ್ಕೆ ಬಳಕೆಯಾಗುತ್ತಿತ್ತು' ಎಂದು ಉಕ್ರೇನ್ನ ಮಿಲಿಟರಿ ಗುಪ್ತಚರ ಏಜೆನ್ಸಿ ಸೋಮವಾರ ಹೇಳಿದೆ.
ಈ ಮಧ್ಯೆ, ಉತ್ತರ ಕೊರಿಯಾವು ರಶ್ಯಕ್ಕೆ ಪಡೆಗಳನ್ನು ರವಾನಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ. ರಶ್ಯ ಹಾಗೂ ಉತ್ತರ ಕೊರಿಯಾ ಆಡಳಿತದ ನಡುವೆ ಮೈತ್ರಿ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ರಶ್ಯದ ಮಿಲಿಟರಿ ಪಡೆಗೆ ಶಸ್ತ್ರಾಸ್ತ್ರ ಮಾತ್ರವಲ್ಲ ಮಾನವ ಸಂಪನ್ಮೂಲವನ್ನೂ ಉತ್ತರ ಕೊರಿಯಾ ರವಾನಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ನಮ್ಮ ಮಿತ್ರದೇಶಗಳಿಂದ ಇನ್ನಷ್ಟು ಮಿಲಿಟರಿ ಮತ್ತು ಆರ್ಥಿಕ ನೆರವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.







