ರಶ್ಯದ ಮೇಲೆ ಉಕ್ರೇನ್ ಡ್ರೋನ್ ದಾಳಿ : ಕನಿಷ್ಠ 6 ಜನರು ಮೃತ್ಯು

Photo Credit : aljazeera.com
ಮಾಸ್ಕೊ, ಆ.16: ಶನಿವಾರ ತಡರಾತ್ರಿಯಿಂದ ರಶ್ಯಾದಾದ್ಯಂತ ಉಕ್ರೇನ್ ನೂರಾರು ಡ್ರೋನ್ಗಳನ್ನು ಪ್ರಯೋಗಿಸಿದ್ದು ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಇದು ಯುದ್ಧದ ಅವಧಿಯಲ್ಲಿ ಉಕ್ರೇನ್ ನಡೆಸಿದ ಅತಿದೊಡ್ಡ ವೈಮಾನಿಕ ದಾಳಿಗಳಲ್ಲಿ ಒಂದಾಗಿದೆ.
822 ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ. ಪೊಡೊಲ್ಸ್ಕ್ ನಗರದಲ್ಲಿ ಪ್ರಮುಖ ಆನ್ಲೈನ್ ಕಂಪನಿ `ವೈಲ್ಡ್ಬೆರ್ರಿಸ್'ನ ಗೋದಾಮಿನಲ್ಲಿ ಉಕ್ರೇನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದೆ. ಹಲವಾರು ಮನೆಗಳು ಮತ್ತು ರೈಲ್ವೆ ನಿಲ್ದಾಣಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ಉಕ್ರೇನ್ ಕೂಡ ರಶ್ಯದ ದಾಳಿಗೆ ಒಳಗಾಗಿದ್ದು, ಡ್ರೋನ್ ದಾಳಿಗಳು ಮನೆಗಳನ್ನು ಧ್ವಂಸಗೊಳಿಸಿದೆ. ರಶ್ಯದ ದಾಳಿಗಳು ಉಕ್ರೇನ್ ರಾಜಧಾನಿ ಕೀವ್ನಲ್ಲಿ ಬೆಂಕಿಯ ಅನಾಹುತಗಳನ್ನು ಸೃಷ್ಟಿಸಿದ್ದು, ಆರು ಜನರಿಗೆ ಗಾಯಗಳಾಗಿವೆ. ನಗರದ ಪ್ರಮುಖ ಪುಸ್ತಕ ಮಾರುಕಟ್ಟೆಯೊಂದರಲ್ಲಿ ಬೆಂಕಿ ವ್ಯಾಪಿಸಿ, ಪೊಚೈನಾ ಮೆಟ್ರೋ ನಿಲ್ದಾಣದ ಬಳಿಯಿದ್ದ ಅಂಗಡಿಗಳನ್ನು ಭಸ್ಮಗೊಳಿಸಿದೆ. ಕ್ರಿವಿ ರಿಹ್ನಲ್ಲಿರುವ ಲೋಹದ ಕಾರ್ಖಾನೆ ಮತ್ತು ಉಕ್ರೇನ್ನ `ಫ್ಲೆಮಿಂಗೋ' ಕ್ಷಿಪಣಿ ತಯಾರಿಕಾ ಘಟಕ ಸೇರಿದಂತೆ ಕೀವ್ನಲ್ಲಿರುವ ಹಲವು ಮಿಲಿಟರಿ- ಕೈಗಾರಿಕಾ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.






