ರಶ್ಯದ ಗ್ಯಾಸ್ ಪೈಪ್ಲೈನ್ ಮೇಲೆ ಉಕ್ರೇನ್ ದಾಳಿ: ಮೂವರು ಮೃತ್ಯು

ಸಾಂದರ್ಭಿಕ ಚಿತ್ರ - AI
ಮಾಸ್ಕೋ, ಆ.3: ಶುಕ್ರವಾರ ತಡರಾತ್ರಿ ರಶ್ಯದ ಮಿಲಿಟರಿ ಗುರಿಗಳು ಹಾಗೂ ಗ್ಯಾಸ್ ಪೈಪ್ಲೈನ್ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ದೀರ್ಘ ವ್ಯಾಪ್ತಿಯ ಡ್ರೋನ್ ಗಳನ್ನು ಬಳಸಿ ನಡೆಸಿದ ದಾಳಿಯಲ್ಲಿ ನೈಋತ್ಯದ ಪಟ್ಟಣ ಪ್ರಿಮೊಸ್ರ್ಕೊ – ಅರ್ಕಾಸ್ರ್ಕ್ನಲ್ಲಿ ಮಿಲಿಟರಿ ವಾಯುನೆಲೆಗೆ ಹಾನಿಯಾಗಿದ್ದು ಬೆಂಕಿ ಕಾಣಿಸಿಕೊಂಡಿದೆ. ಇರಾನ್ ನಿರ್ಮಿತ ಶಾಹೆದ್ ಡ್ರೋನ್ ಗಳನ್ನು ದಾಸ್ತಾನು ಇರಿಸಲು ಈ ವಾಯುನೆಲೆಯನ್ನು ಬಳಸಲಾಗುತ್ತಿದೆ. ದಕ್ಷಿಣದ ಪೆಂಝಾ ಪ್ರಾಂತದಲ್ಲಿ ರಶ್ಯದ ಮಿಲಿಟರಿಗಾಗಿ ಸಶಸ್ತ್ರ ವಾಹನಗಳು, ನೌಕೆಗಳು, ವಾಯುಯಾನ ಸಾಧನಗಳನ್ನು ನಿರ್ಮಿಸುವ ಸಂಸ್ಥೆಯೊಂದರ ಮೇಲೆಯೂ ಡ್ರೋನ್ ದಾಳಿ ನಡೆದಿದೆ ಎಂದು ಉಕ್ರೇನ್ನ ಎಸ್ಬಿಯು ಭದ್ರತಾ ಸಂಸ್ಥೆ ಹೇಳಿದೆ.
ಪೆಂಝಾ ಪ್ರಾಂತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು ಇತರ ಇಬ್ಬರು ಗಾಯಗೊಂಡಿದ್ದಾರೆ, ಸಮಾರಾ ಪ್ರಾಂತದಲ್ಲಿ ಡ್ರೋನ್ ನ ಅವಶೇಷಗಳು ಮನೆಯೊಂದರ ಮೇಲೆ ಬಿದ್ದು ಒಬ್ಬ ವ್ಯಕ್ತಿ , ರೊಸ್ತೊವ್ ಪ್ರಾಂತದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ರಶ್ಯದ ಭೂಪ್ರದೇಶವನ್ನು ಗುರಿಯಾಗಿಸಿದ್ದ ಉಕ್ರೇನ್ನ 112 ಡ್ರೋನ್ ಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ.





