ರಶ್ಯದ ಮೇಲೆ ಉಕ್ರೇನ್ ಡ್ರೋನ್ ಸುರಿಮಳೆ: ಇಬ್ಬರು ಮೃತ್ಯು; 18 ಮಂದಿಗೆ ಗಾಯ

PC : NDTV
ಮಾಸ್ಕೋ: ರಶ್ಯ ರಾಜಧಾನಿ ಮಾಸ್ಕೋ ಸೇರಿದಂತೆ 18 ನಗರಗಳನ್ನು ಗುರಿಯಾಗಿಸಿ ಉಕ್ರೇನ್ ಡ್ರೋನ್ಗಳ ಸುರಿಮಳೆಗರೆದಿದ್ದು ಇಬ್ಬರು ಮೃತಪಟ್ಟಿದ್ದಾರೆ ಮತ್ತು ಮೂವರು ಮಕ್ಕಳ ಸಹಿತ 18 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
2025ರಲ್ಲಿ ರಶ್ಯದ ಮೇಲೆ ಉಕ್ರೇನ್ ನಡೆಸಿದ ಬೃಹತ್ ದಾಳಿ ಇದಾಗಿದೆ. ಉಕ್ರೇನ್ ಉಡಾಯಿಸಿದ 337 ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ರಶ್ಯದ ವಾಯುಪಡೆ ಹೇಳಿದೆ. ಮಾಸ್ಕೋ ವಲಯದಲ್ಲಿ ದಾಳಿಯ ಬಳಿಕ 7 ಅಪಾರ್ಟ್ಮೆಂಟ್ಗಳನ್ನು ತೆರವುಗೊಳಿಸಲಾಗಿದೆ. ಹಲವು ಕಾರುಗಳಿಗೆ ಮತ್ತು ಒಂದು ಮನೆಯ ಛಾವಣಿಗೆ ಹಾನಿಯಾಗಿದೆ ಎಂದು ಗವರ್ನರ್ ಆಂಡ್ರೆಯ್ ವೊರೊಬ್ಯೋವ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಸ್ಕೋದ ಮೂರು ವಿಮಾನ ನಿಲ್ದಾಣಗಳಲ್ಲಿನ ವಿಮಾನ ಪ್ರಯಾಣಗಳನ್ನು ಸೀಮಿತಗೊಳಿಸಲಾಗಿದೆ. ಮಾಸ್ಕೋದ ಡೊಮೊಡೆಡೋವೊ ರೈಲು ನಿಲ್ದಾಣದ ಮೂಲಕ ಸಾಗುವ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.
ಕಸ್ರ್ಕ್ ವಲಯದಲ್ಲಿ 126 ಡ್ರೋನ್ಗಳನ್ನು, ಮಾಸ್ಕೋ ವಲಯದಲ್ಲಿ 91 ಡ್ರೋನ್ಗಳನ್ನು, ಮಾಸ್ಕೋ ನಗರದತ್ತ ಹಾರಿ ಬರುತ್ತಿದ್ದ 70 ಡ್ರೋನ್ಗಳನ್ನು, ಬೆಲ್ಗ್ರೋಡ್, ಬ್ರಯಾಂಸ್ಕ್, ಕಲುಗ, ನೊವೊಗ್ರೊಡ್ ಮತ್ತಿತರ ಪ್ರಾಂತಗಳಲ್ಲಿಯೂ ಹಲವು ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಉಕ್ರೇನ್ ಯುದ್ಧ ಅಂತ್ಯಗೊಳಿಸುವ ಬಗ್ಗೆ ಸೌದಿ ಅರೆಬಿಯಾದಲ್ಲಿ ಉಕ್ರೇನ್ ಮತ್ತು ಅಮೆರಿಕ ನಿಯೋಗದ ನಡುವಿನ ಮಾತುಕತೆ ಆರಂಭಗೊಳ್ಳುವ ಕೆಲ ಗಂಟೆಗಳ ಮುನ್ನ ಈ ದಾಳಿ ನಡೆದಿರುವುದಾಗಿ ವರದಿಯಾಗಿದೆ.





