ಉಕ್ರೇನ್: ಹಂಗರಿ ಗೂಢಚರ್ಯೆ ಜಾಲ ಬಹಿರಂಗ; ಇಬ್ಬರು ಶಂಕಿತರ ಬಂಧನ

ಸಾಂದರ್ಭಿಕ ಚಿತ್ರ
ಕೀವ್: ಹಂಗರಿ ಪರವಾಗಿ ಗೂಢಚರ್ಯೆ ಮಾಡುತ್ತಿದ್ದ ಶಂಕೆಯಲ್ಲಿ ಇಬ್ಬರನ್ನು ಬಂಧಿಸಿರುವುದಾಗಿ ಉಕ್ರೇನ್ ನ ಭದ್ರತಾ ಏಜೆನ್ಸಿ ಶುಕ್ರವಾರ ಹೇಳಿದೆ.
ಹಂಗರಿಯ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಉಕ್ರೇನ್ ನ ಝಕರ್ಪಟ್ಟಿಯಾ ಪ್ರಾಂತದಲ್ಲಿ ಉಕ್ರೇನ್ ನ ಮಿಲಿಟರಿ ಕುರಿತ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಇಬ್ಬರೂ ಉಕ್ರೇನ್ ಮಿಲಿಟರಿಯ ಮಾಜಿ ಸದಸ್ಯರಾಗಿದ್ದು ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಉಕ್ರೇನ್ ಅಧಿಕಾರಿಗಳ ಪ್ರತಿಪಾದನೆಯನ್ನು ಹಂಗರಿ ವಿರೋಧಿ ಅಭಿಯಾನವೆಂದು ವರ್ಗೀಕರಿಸಬಹುದು ಎಂದು ಹಂಗರಿಯ ವಿದೇಶಾಂಗ ಸಚಿವ ಪೀಟರ್ ಸಿಜಾರ್ಟೊ ಪ್ರತಿಕ್ರಿಯಿಸಿದ್ದಾರೆ. ಝಕರ್ಪಟ್ಟಿಯಾ ಪ್ರಾಂತದಲ್ಲಿ ಹಂಗರಿಯ ಜನಾಂಗೀಯ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರ ಹಕ್ಕುಗಳ ವಿಷಯದಲ್ಲಿ ಉಕ್ರೇನ್ ಮತ್ತು ಹಂಗರಿ ನಡುವೆ ಭಿನ್ನಾಭಿಪ್ರಾಯವಿದೆ. ನೇಟೊ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯನಾಗಿರುವ ಹಂಗರಿ 2022ರಲ್ಲಿ ಉಕ್ರೇನ್ ಮೇಲೆ ರಶ್ಯದ ಪೂರ್ಣಪ್ರಮಾಣದ ಆಕ್ರಮಣದ ಬಳಿಕ ಉಕ್ರೇನ್ ವಿರೋಧಿ ನಿಲುವನ್ನು ತಳೆದಿದ್ದು ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆ ಅಥವಾ ಹಂಗರಿ ಪ್ರದೇಶದ ಮೂಲಕ ಉಕ್ರೇನ್ ಗೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ನಿರಾಕರಿಸಿದೆ. ಜೊತೆಗೆ ಉಕ್ರೇನ್ ಗೆ ಯುರೋಪಿಯನ್ ಯೂನಿಯನ್ ಸದಸ್ಯತ್ವವನ್ನು ವಿರೋಧಿಸುತ್ತಿದೆ.





