ಕ್ಯಾಸ್ಪಿಯನ್ ಸಮುದ್ರದಲ್ಲಿ ಹಡಗಿನ ಮೇಲೆ ಉಕ್ರೇನ್ ದಾಳಿ: ಇರಾನ್ ಆರೋಪ

ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್, ಜು. 26: ಉಕ್ರೇನ್ ಕ್ಯಾಸ್ಪಿಯನ್ ಸಮುದ್ರದಲ್ಲಿ ತನ್ನ ಸರಕು ಹಡಗಿನ ಮೇಲೆ ದಾಳಿ ನಡೆಸಿ ಓರ್ವ ನಾವಿಕನನ್ನು ಕೊಂದಿದೆ ಮತ್ತು ಮತ್ತೊಬ್ಬನನ್ನು ಗಾಯಗೊಳಿಸಿದೆ ಎಂದು ಇರಾನ್ ಆರೋಪಿಸಿದೆ.
ರಷ್ಯಾ–ಇರಾನ್ ನಡುವೆ ಮಿಲಿಟರಿ ಸರಕುಗಳನ್ನು ಸಾಗಿಸುವ ಹಡಗುಗಳ ಮೇಲೆ ಕ್ಯಾಸ್ಪಿಯನ್ ಸಮುದ್ರದಲ್ಲಿ ಉಕ್ರೇನ್ ಸುದೀರ್ಘ ವ್ಯಾಪ್ತಿಯ ದಾಳಿಗಳನ್ನು ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ ಬೆನ್ನಲ್ಲೇ ಈ ಆರೋಪ ಕೇಳಿಬಂದಿದೆ. ಇರಾನ್ ಮತ್ತು ರಷ್ಯಾ ನಡುವೆ ಮಿಲಿಟರಿ ಸರಕುಗಳನ್ನು ಸಾಗಿಸಲು ಬಳಸಲಾಗುತ್ತಿದ್ದ, ಅಂತರ್ರಾಷ್ಟ್ರೀಯ ನಿರ್ಬಂಧಗಳ ಅಡಿಯಲ್ಲಿರುವ ಸರಕು ಹಡಗುಗಳ ವಿರುದ್ಧ ಡ್ರೋನ್ ದಾಳಿಗಳನ್ನು ನಡೆಸಲಾಗಿದೆ ಎಂದು ಉಕ್ರೇನ್ನ ಗುಪ್ತಚರ ಸಂಸ್ಥೆಗಳು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿವೆ.
ಶನಿವಾರ ಬೆಳಿಗ್ಗೆ ನಡೆದ ದಾಳಿಯಿಂದ ಹಡಗು ಸ್ಫೋಟಕ್ಕೊಳಗಾಗಿದ್ದು, ಓರ್ವ ನಾವಿಕ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿದ್ದಾನೆ. ಈ ಹಗೆತನದ ಹಾಗೂ ಅಪರಾಧ ಕೃತ್ಯವನ್ನು ಪ್ರತಿಭಟಿಸಲು ಇರಾನ್ ವಿದೇಶಾಂಗ ಸಚಿವಾಲಯವು ಶನಿವಾರ ಉಕ್ರೇನ್ ನ ರಾಯಭಾರಿಗೆ ಸಮನ್ಸ್ ನೀಡಿದೆ. ಈ ದಾಳಿಯ ವಿರುದ್ಧ ಯುರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ದೃಢವಾದ ಪ್ರತಿಕ್ರಿಯೆ ನೀಡಬೇಕೆಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಆಗ್ರಹಿಸಿರುವುದಾಗಿ ಐಆರ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.






