ಉಕ್ರೇನ್ | ಲಕ್ಷ್ಮಿ ಮಿತ್ತಲ್ ಅವರ ಉಕ್ಕಿನ ಕಾರ್ಖಾನೆ ಮೇಲೆ ರಷ್ಯಾದಿಂದ ಕ್ಷಿಪಣಿ ದಾಳಿ: ಇಬ್ಬರು ಮೃತ್ಯು

Photo | timesofindia
ಕೀವ್ : ಉಕ್ರೇನ್ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ ಲಕ್ಷ್ಮಿ ಮಿತ್ತಲ್ ಒಡೆತನದ ಉಕ್ರೇನ್ನ ಅತಿ ದೊಡ್ಡ ಉಕ್ಕು ಉತ್ಪಾದನಾ ಘಟಕವಾದ ಆರ್ಸಿಲರ್ ಮಿತ್ತಲ್ ಕ್ರಿವಿ ರಿಹ್ ಗೆ ಹಾನಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಗುತ್ತಿಗೆದಾರರು ಗಾಯಗೊಂಡಿದ್ದಾರೆ ಎಂದು Kyiv Post ವರದಿ ಮಾಡಿದೆ.
ಆಗಸ್ಟ್ 16 ರಂದು ಮಧ್ಯ ಉಕ್ರೇನ್ನ ಕ್ರಿವಿ ರಿಹ್ ನಗರದಲ್ಲಿರುವ ಗಣಿಗಾರಿಕೆ ಮತ್ತು ಲೋಹಶಾಸ್ತ್ರ ಘಟಕದ ಮೇಲೆ ನಡೆದ ಈ ಕ್ಷಿಪಣಿ ದಾಳಿಯ ಪರಿಣಾಮವಾಗಿ, ಕಂಪೆನಿಯು ತನ್ನ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಬೇಕಾಯಿತು.
ವಿಶ್ವದ ಎರಡನೇ ಅತಿ ದೊಡ್ಡ ಉಕ್ಕು ಉತ್ಪಾದನಾ ಸಂಸ್ಥೆಯ ಉಕ್ರೇನ್ ಘಟಕವಾದ ಆರ್ಸಿಲರ್ ಮಿತ್ತಲ್, ಕ್ಷಿಪಣಿ ದಾಳಿಯಲ್ಲಿ ತನ್ನ ಒಂದು ಘಟಕ ಹಾನಿಗೊಳಗಾಗಿರುವುದನ್ನು ಖಚಿತಪಡಿಸಿದೆ.
ಈನ ಬಗ್ಗೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ಕ್ರಿವಿ ರಿಹ್ ಮೇಲಿನ ರಷ್ಯಾದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜಧಾನಿ ಕೀವ್ನಲ್ಲಿ ರಷ್ಯಾದ ದಾಳಿಯಿಂದಾಗಿ ಹಲವೆಡೆ ಬೆಂಕಿ ಕಾಣಿಸಿಕೊಂಡಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಪೊಚೈನಾ ಮೆಟ್ರೋ ನಿಲ್ದಾಣದ ಬಳಿಯಿರುವ ರಾಜಧಾನಿಯ ಅತಿ ದೊಡ್ಡ ಪುಸ್ತಕ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು, ಸಾಲು ಸಾಲು ಅಂಗಡಿಗಳು ಭಸ್ಮವಾಗಿ ದಟ್ಟ ಕಪ್ಪು ಹೊಗೆ ಆಕಾಶದೆತ್ತರಕ್ಕೆ ಚಿಮ್ಮಿರುವುದು ಕಂಡು ಬಂದಿದೆ.
ಉಕ್ರೇನ್ನ ಇತರ ಭಾಗಗಳಲ್ಲೂ ಈ ದಾಳಿಗಳು ಸಾವು-ನೋವು ಹಾಗೂ ಹಾನಿಯನ್ನು ಉಂಟುಮಾಡಿವೆ. ದಕ್ಷಿಣದ ಜಪೋರಿಝಿಯಾ ಪ್ರದೇಶದಲ್ಲಿ ಮನೆಯೊಂದರ ಮೇಲೆ ದಾಳಿ ನಡೆದ ಪರಿಣಾಮ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಸೇನಾ ಆಡಳಿತದ ಮುಖ್ಯಸ್ಥ ಇವಾನ್ ಫೆಡೋರೊವ್ ತಿಳಿಸಿದ್ದಾರೆ.






