ಉಕ್ರೇನ್: ರಶ್ಯದ ವೈಮಾನಿಕ ದಾಳಿಯಲ್ಲಿ ಮೂವರು ಮೃತ್ಯು

Image: Ukrainian Emergency Service/AFP
ಕೀವ್, ಜು.26: ಉಕ್ರೇನ್ ನ ಹಲವು ಪ್ರದೇಶಗಳ ಮೇಲೆ ಶುಕ್ರವಾರ ತಡರಾತ್ರಿ ರಶ್ಯ ನಡೆಸಿದ ದಾಳಿಯಲ್ಲಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದು ಇತರ 6 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೆ ಉಕ್ರೇನ್ ನ ನಿಪ್ರೋ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿ ರಶ್ಯ 253 ಡ್ರೋನ್ ಗಳನ್ನು ಹಾಗೂ 27 ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಇದರಲ್ಲಿ 210 ಡ್ರೋನ್ ಗಳು ಹಾಗೂ 17 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಮೂವರು ಸಾವನ್ನಪ್ಪಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ. ಹಲವು ಜನವಸತಿ ಕಟ್ಟಡಗಳಲ್ಲಿ ಬೆಂಕಿ ಹರಡಿದೆ. ಹಲವು ವಾಹನಗಳಿಗೆ ಹಾನಿಯಾಗಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದೆ ಎಂದು ಸ್ಥಳೀಯ ಗವರ್ನರ್ ಸೆಹ್ರಿಯ್ ಲಿಸಾಕ್ ಹೇಳಿದ್ದಾರೆ. ಖಾರ್ಕಿವ್, ಝಪೋರಿಜಿಯಾ ಪ್ರಾಂತಗಳ ಮೇಲೆಯೂ ರಶ್ಯ ಭೀಕರ ಬಾಂಬ್ ದಾಳಿ ನಡೆಸಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ಉಕ್ರೇನ್ ನ ಡ್ರೋನ್ ದಾಳಿಯಲ್ಲಿ ರೊಸ್ತೋವ್ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದು ಕಾರೊಂದು ಬೆಂಕಿಯಲ್ಲಿ ಸುಟ್ಟುಹೋಗಿದೆ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.





