ಉಕ್ರೇನ್ ನ ರಶ್ಯ ಆಕ್ರಮಿತ ಪ್ರದೇಶಗಳ ಉಲ್ಲೇಖವಿಲ್ಲದೆ ವಿಶ್ವಸಂಸ್ಥೆ ನಿರ್ಣಯ ಪ್ರಸ್ತಾಪಿಸಿದ ಅಮೆರಿಕ
ಉತ್ತಮ ನಡೆ ಎಂದು ಸ್ವಾಗತಿಸಿದ ರಶ್ಯ ನಿಯೋಗ

ಸಾಂದರ್ಭಿಕ ಚಿತ್ರ | PC : PTI
ವಿಶ್ವಸಂಸ್ಥೆ: ರಶ್ಯವು ವಶಪಡಿಸಿಕೊಂಡಿರುವ ಉಕ್ರೇನ್ ಪ್ರದೇಶಗಳ ಯಾವುದೇ ಉಲ್ಲೇಖವಿಲ್ಲದ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಅಮೆರಿಕ ಪ್ರಸ್ತಾಪಿಸಿರುವುದಾಗಿ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಸರಳ, ಐತಿಹಾಸಿಕ ನಿರ್ಣಯವನ್ನು ಅನುಮೋದಿಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ. ಉಕ್ರೇನ್ ಕುರಿತ ವಿಶ್ವಸಂಸ್ಥೆಯ ನಿರ್ಣಯವನ್ನು ಸಹಪ್ರಾಯೋಜಿಸಲು ಅಮೆರಿಕ ಗುರುವಾರ ನಿರಾಕರಿಸಿದ ಬಳಿಕ ಉಕ್ರೇನ್ ಹಾಗೂ ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಪ್ರತ್ಯೇಕ ಕರಡು ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿರುವಂತೆಯೇ ಅಮೆರಿಕ ಅನಿರೀಕ್ಷಿತವಾಗಿ ಹೊಸ ನಿರ್ಣಯವನ್ನು ಪ್ರಸ್ತಾಪಿಸಿರುವುದು ಗಮನಾರ್ಹವಾಗಿದೆ.
ಅಮೆರಿಕ ಪ್ರಸ್ತಾಪಿಸಿದ ಕರಡು ಮಸೂದೆಯಲ್ಲಿ ಉಕ್ರೇನ್ ನ ಪ್ರಾದೇಶಿಕ ಸಮಗ್ರತೆಯ ಬಗ್ಗೆ ಉಲ್ಲೇಖಿಸದೆ `ಬಿಕ್ಕಟ್ಟು ತ್ವರಿತ ಅಂತ್ಯ'ಗೊಳ್ಳಬೇಕು ಎಂದು ಕರೆ ನೀಡಲಾಗಿದೆ. ಅಮೆರಿಕ ಪ್ರಸ್ತಾಪಿಸಿದ ನಿರ್ಣಯವು ಉತ್ತಮ ನಡೆಯಾಗಿದೆ ಎಂದು ವಿಶ್ವಸಂಸ್ಥೆಗೆ ರಶ್ಯದ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ ಸ್ವಾಗತಿಸಿದ್ದು, ಆದರೆ ಇದು ಬಿಕ್ಕಟ್ಟಿನ ಮೂಲದ ಬಗ್ಗೆ ಉಲ್ಲೇಖಿಸಿಲ್ಲ ಎಂದಿದ್ದಾರೆ.
`ರಶ್ಯ-ಉಕ್ರೇನ್ ಸಂಘರ್ಷದಿಂದಾಗಿ ಸಾವು-ನೋವಿನ ದುರಂತಕ್ಕೆ ಶೋಕ ಸೂಚಿಸುವ' ಉಲ್ಲೇಖದೊಂದಿಗೆ ಪ್ರಾರಂಭಗೊಂಡಿರುವ ಕರಡು ಮಸೂದೆಯ ಪಠ್ಯದಲ್ಲಿ `ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉಳಿಸಿಕೊಳ್ಳುವುದು ವಿಶ್ವಸಂಸ್ಥೆಯ ಉದ್ದೇಶವಾಗಿದೆ' ಎಂದು ಉಲ್ಲೇಖಿಸಿದೆ. ಆದರೆ ಸಂಘರ್ಷದ ಮೂಲ ರಶ್ಯ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಅಮೆರಿಕ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿರುವ ಸರಳ, ಐತಿಹಾಸಿಕ ನಿರ್ಣಯವನ್ನು ಎಲ್ಲಾ ಸದಸ್ಯ ರಾಷ್ಟ್ರಗಳೂ ಬೆಂಬಲಿಸಿ ಶಾಂತಿ ಸ್ಥಾಪನೆಗೆ ನೆರವಾಗಬೇಕು' ಎಂದು ಅಮೆರಿಕದ ವಿದೇಶಾಂಗ ಸಚಿವ ರೂಬಿಯೊ ಹೇಳಿದ್ದಾರೆ.
`ಅಮೆರಿಕದ ನಿರ್ಣಯದ ಬಗ್ಗೆ ತಕ್ಷಣಕ್ಕೆ ತಮ್ಮಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲ' ಎಂದು ವಿಶ್ವಸಂಸ್ಥೆಗೆ ಫ್ರಾನ್ಸ್ ನ ರಾಯಭಾರಿ ನಿಕೊಲಸ್ ಡಿ ರಿವೆರೆ ಹೇಳಿದ್ದಾರೆ.
► ಉಕ್ರೇನ್, ಮಿತ್ರದೇಶಗಳ ನಿರ್ಣಯ
ಈ ಮಧ್ಯೆ, ಉಕ್ರೇನ್ ಹಾಗೂ ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಪ್ರಸ್ತಾಪಿಸಿರುವ ಕರಡು ಮಸೂದೆಯಲ್ಲಿ ` ಈ ವರ್ಷ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಪ್ರಯತ್ನಗಳನ್ನು ದ್ವಿಗುಣಗೊಳಿಸುವ ಅಗತ್ಯವನ್ನು ಒತ್ತಿಹೇಳಿದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಹಲವಾರು ಉಪಕ್ರಮಗಳನ್ನು ಶ್ಲಾಘಿಸಿದ್ದು, ಆಕ್ರಮಣಕ್ಕಾಗಿ ರಶ್ಯವನ್ನು ದೂಷಿಸಲಾಗಿದೆ. ಜತೆಗೆ, ಉಕ್ರೇನ್ ನ ಪ್ರಾದೇಶಿಕ ಸಮಗ್ರತೆಗೆ ಬದ್ಧವಾಗಿರುವುದಾಗಿ' ಹೇಳಿದೆ.
ಅಲ್ಲದೆ, ಉಕ್ರೇನ್ನಿಂದ ರಶ್ಯನ್ ಪಡೆಗಳು ತಕ್ಷಣ, ಬೇಷರತ್ ಹಿಂದೆ ಸರಿಯಬೇಕೆಂಬ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಈ ಹಿಂದಿನ ಆಗ್ರಹಗಳನ್ನೂ ಕರಡು ಮಸೂದೆ ಪುನರುಚ್ಚರಿಸಿದೆ. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ ಸುಮಾರು 140 ರಾಷ್ಟ್ರಗಳು ಉಕ್ರೇನ್ ಪರ ನಿಂತಿವೆ.







