ಉಕ್ರೇನ್ ಗೆ ನೇಟೊ ಸದಸ್ಯತ್ವ ಅವಾಸ್ತವಿಕ: ಅಮೆರಿಕ

Photo credit | X/@PeteHegseth
ವಾಷಿಂಗ್ಟನ್: ಉಕ್ರೇನ್ ಗೆ ನೇಟೊ ಸದಸ್ಯತ್ವ `ಅವಾಸ್ತವಿಕ' ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದು ಉಕ್ರೇನ್ ತನ್ನ ಎಲ್ಲಾ ಭೂಪ್ರದೇಶಗಳನ್ನು ರಶ್ಯದಿಂದ ಗೆಲ್ಲುವ ಭವಸೆಯನ್ನು ತ್ಯಜಿಸಬೇಕು ಮತ್ತು ಬದಲಾಗಿ ಅಂತರಾಷ್ಟ್ರೀಯ ಬೆಂಬಲದೊಂದಿಗೆ ಶಾಂತಿ ಮಾತುಕತೆಯ ಮೂಲಕ ವಿವಾದ ಇತ್ಯರ್ಥಕ್ಕೆ ಸಿದ್ಧವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಯುದ್ಧವು ಮೂರು ವರ್ಷಗಳನ್ನು ಸಮೀಪಿಸುತ್ತಿದ್ದಂತೆಯೇ ರಶ್ಯ-ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿ ಟ್ರಂಪ್ ಆಡಳಿತದ ನಿಲುವಿನ ಕುರಿತು ಹೆಗ್ಸೆತ್ ತೀಕ್ಷ್ಣ ಸಾರ್ವಜನಿಕ ಪ್ರತಿಕ್ರಿಯೆ ನೀಡಿದರು. `ನಿಮ್ಮ ಹಾಗೆಯೇ ನಾವು ಕೂಡಾ ಸಮೃದ್ಧ, ಸಾರ್ವಭೌಮ ಉಕ್ರೇನ್ ಅನ್ನು ಇಚ್ಛಿಸುತ್ತೇವೆ. ಆದರೆ 2014ಕ್ಕಿಂತ ಹಿಂದಿನ ಉಕ್ರೇನ್ ನ ಗಡಿಭಾಗಗಳ ಸ್ಥಿತಿಗೆ ಮರಳುವುದು ಅವಾಸ್ತವಿಕ ಉದ್ದೇಶ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು' ಎಂದು ಬೆಲ್ಜಿಯಂನಲ್ಲಿ ಉಕ್ರೇನ್ ಅಧಿಕಾರಿಗಳು ಹಾಗೂ ನೇಟೊ ರಕ್ಷಣಾ ಸಚಿವರ ಸಭೆಗೂ ಮುನ್ನ ಹೆಗ್ಸೆತ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಭ್ರಮೆಯ ಗುರಿಯನ್ನು ಬೆನ್ನಟ್ಟುವುದು ಯುದ್ಧವನ್ನು ವಿಸ್ತರಿಸುತ್ತದೆ ಮತ್ತು ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗುತ್ತದೆ ಎಂದ ಅವರು, ಉಕ್ರೇನ್ ಗೆ ಆರ್ಥಿಕ ಮತ್ತು ಮಿಲಿಟರಿ ಬೆಂಬಲದ ಹೊಣೆಯನ್ನು ಯುರೋಪ್ ವಹಿಸಿಕೊಳ್ಳುವಂತೆ ಮತ್ತು ಅಮೆರಿಕದ ತುಕಡಿಯನ್ನು ಹೊಂದಿಲ್ಲದ ಶಾಂತಿಪಾಲನಾ ಪಡೆಯನ್ನು ಉಕ್ರೇನ್ ನಲ್ಲಿ ನಿಯೋಜಿಸುವ ಬಗ್ಗೆ ಸಲಹೆ ನೀಡಿದ್ದಾರೆ.
ಈ ಹೇಳಿಕೆಯು ಬೈಡನ್ ಆಡಳಿತದ ಹಾಗೂ ಉಕ್ರೇನ್ ನ ಮಿತ್ರರಾಷ್ಟ್ರಗಳ ನಿಲುವಿನಿಂದ ಸಂಪೂರ್ಣ ಬದಲಾವಣೆಯಾಗಿದೆ. ರಶ್ಯ ವಶಪಡಿಸಿಕೊಂಡಿರುವ ತನ್ನ ಭೂಭಾಗಗಳನ್ನು ಹಿಂದಕ್ಕೆ ಪಡೆಯುವ ಮತ್ತು ನೇಟೊ ಸದಸ್ಯತ್ವ ಪಡೆಯುವ ಮೂಲಕ ಭವಿಷ್ಯದ ಆಕ್ರಮಣದಿಂದ ರಕ್ಷಣೆ ಪಡೆಯುವ ಉಕ್ರೇನ್ ಉದ್ದೇಶಕ್ಕೂ ಹಿನ್ನಡೆಯಾಗಲಿದೆ. ಯಾವುದೇ ಶಾಶ್ವತ, ಸ್ಥಿರ ಶಾಂತಿಯು ಯುದ್ಧ ಮತ್ತೆ ಪುನರಾರಂಭವಾಗುವುದಿಲ್ಲ ಎಂಬ ಸಶಕ್ತ ಭದ್ರತಾ ಖಾತರಿಗಳನ್ನು ಒಳಗೊಂಡಿರಬೇಕು ಎಂದು ಹೆಗ್ಸೆತ್ ಪ್ರತಿಪಾದಿಸಿದ್ದು ಇಂತಹ ಖಾತರಿಗಳ ಭಾಗವಾಗಿ ಉಕ್ರೇನ್ ನಲ್ಲಿ ಅಮೆರಿಕದ ಪಡೆಗಳನ್ನು ನಿಯೋಜಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಹೆಗ್ಸೆತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ `ಒಂದು ವೇಳೆ ಉಕ್ರೇನ್ ನೇಟೊಗೆ ಸೇರ್ಪಡೆಯಾಗದಿದ್ದರೆ, ಭವಿಷ್ಯದ ಆಕ್ರಮಣವನ್ನು ಹಿಮ್ಮೆಟ್ಟಿಸಲು ರಶ್ಯದ ಸೇನೆಯಷ್ಟು ಬೃಹತ್ ಸೇನೆಯನ್ನು ನಿರ್ಮಿಸಲು ಅಮೆರಿಕ ನೆರವಾಗಬೇಕು' ಎಂದು ಆಗ್ರಹಿಸಿದ್ದಾರೆ. ಉಕ್ರೇನ್ ನೇಟೋದಲ್ಲಿ ಇಲ್ಲ ಎಂದಾದರೆ ನಾವು ರಶ್ಯ ಈಗ ಹೊಂದಿರುವಷ್ಟು ದೊಡ್ಡ ಸೈನ್ಯವನ್ನು ನಿರ್ಮಿಸುವ ಅಗತ್ಯವಿದೆ ಎಂದು ಝೆಲೆನ್ಸ್ಕಿ ಹೇಳಿರುವುದಾಗಿ ವರದಿಯಾಗಿದೆ.







