ನವೀಕರಿಸಿದ ಶಾಂತಿ ಯೋಜನೆಗೆ ಉಕ್ರೇನ್-ಅಮೆರಿಕ ಸಹಮತ: ಶ್ವೇತಭವನ ಹೇಳಿಕೆ

ಡೊನಾಲ್ಡ್ ಟ್ರಂಪ್ | PC : PTI
ಜಿನೆವಾ, ನ.24: ರಶ್ಯ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವತ್ತ ಗಮನಾರ್ಹ ಪ್ರಗತಿ ಸಾಧಿಸಿರುವುದಾಗಿ ಅಮೆರಿಕಾ ಮತ್ತು ಉಕ್ರೇನ್ ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿರಿಸಿರುವ ಶಾಂತಿ ಯೋಜನೆಯು ರಶ್ಯದ ಪರವಾಗಿವೆ ಎಂಬ ಕಳವಳದ ನಡುವೆ ಜಿನೆವಾದಲ್ಲಿ ಉಕ್ರೇನ್ ಮತ್ತು ಅಮೆರಿಕಾ ನಿಯೋಗಗಳ ನಡುವೆ ಮಾತುಕತೆ ನಡೆಯುತ್ತಿದೆ. ಪರಿಷ್ಕøತ ಶಾಂತಿ ಚೌಕಟ್ಟು ಉಕ್ರೇನ್ ಗೆ ಭದ್ರತಾ ಖಾತರಿಯನ್ನು ಬಲಪಡಿಸುತ್ತದೆ ಎಂದು ಶ್ವೇತಭವನ ಹೇಳಿದೆ. ನವೀಕರಿಸಿದ ಪ್ರಸ್ತಾಪವು `ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುತ್ತದೆ' ಎಂದು ಉಕ್ರೇನ್ ನ ನಿಯೋಗ ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ. ಆದರೆ ಉಕ್ರೇನ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
ಜಿನೆವಾದಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆ ಬಹಳ ಉಪಯುಕ್ತವಾಗಿವೆ ಮತ್ತು ದೀರ್ಘಾವಧಿಯ ಬಳಿಕ ಅತ್ಯಂತ ಧನಾತ್ಮಕ ರೀತಿಯಲ್ಲಿ ನಡೆದಿದೆ. ಏನನ್ನಾದರೂ ಮಾಡಬಹುದು ಎಂಬ ಆಶಾವಾದ ಮೂಡಿದೆ' ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಸೋಮವಾರ ಹೇಳಿದ್ದಾರೆ.
ಶಾಂತಿ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಲು ಟ್ರಂಪ್ ಉಕ್ರೇನ್ ಅಧ್ಯಕ್ಷರಿಗೆ ನವೆಂಬರ್ 27ರ ಗಡುವು ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರೂಬಿಯೊ `ಯುದ್ಧ ಆದಷ್ಟು ಬೇಗ ಕೊನೆಗೊಳ್ಳಬೇಕೆಂಬುದು ಎಲ್ಲರ ಆಶಯವಾಗಿದೆ. ಸೋಮವಾರವೂ ಮಾತುಕತೆ ಮುಂದುವರಿಯಬಹುದು. ಇದು ಅತ್ಯಂತ ಸೂಕ್ಷ್ಮವಾದ ಕ್ಷಣವಾಗಿದೆ. ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ' ಎಂದು ಹೇಳಿದರು. ಕೆಲವು ಬಾಕಿಯುಳಿದಿರುವ ಸಮಸ್ಯೆಗಳನ್ನು ಈಗಿನ ಮಾತುಕತೆಯಲ್ಲೇ ಪರಿಹರಿಸಬಹುದು. ಇನ್ನೂ ಕೆಲವು ಸಮಸ್ಯೆಗಳು ಇನ್ನಷ್ಟು ಚರ್ಚೆ ಮತ್ತು ಉನ್ನತ ಮಟ್ಟದ ಸಭೆಯಲ್ಲಿ ಇತ್ಯರ್ಥಗೊಳ್ಳಬಹುದು. ಭವಿಷ್ಯದಲ್ಲಿ ರಶ್ಯದ ಆಕ್ರಮಣದ ವಿರುದ್ಧ ಉಕ್ರೇನ್ ನ ಭದ್ರತೆಯನ್ನು ಹೇಗೆ ಖಾತರಿಪಡಿಸಲಾಗುತ್ತದೆ ಮತ್ತು ನೇಟೋ ವಹಿಸುವ ಪಾತ್ರದ ಕುರಿತಂತೆ ಹಲವಾರು ನಿರ್ಣಾಯಕ ಪ್ರಶ್ನೆಗಳು ಬಗೆಹರಿಯದೆ ಉಳಿದಿವೆ ಎಂದು ರೂಬಿಯೊ ಹೇಳಿದ್ದಾರೆ.
ِ►ಬಲಪ್ರಯೋಗಿಸಿ ಗಡಿಗಳನ್ನು ಬದಲಾಯಿಸಲಾಗದು: ಝೆಲೆನ್ಸ್ಕಿ
ಜಿನೆವಾದಲ್ಲಿ ನಡೆದ ಮಾತುಕತೆಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ` ಪುಟಿನ್ ತಾನು ಕದ್ದಿರುವುದಕ್ಕೆ ಕಾನೂನು ಮಾನ್ಯತೆಯನ್ನು ಬಯಸಿದ್ದಾರೆ. ಆದರೆ ಬಲವಂತದಿಂದ ಮತ್ತು ಬಲಪ್ರಯೋಗದಿಂದ ಗಡಿಗಳನ್ನು ಬದಲಾಯಿಸಲಾಗದು' ಎಂದಿದ್ದಾರೆ.
ಉಕ್ರೇನ್ ನ ಭೂಪ್ರದೇಶಗಳನ್ನು ರಶ್ಯಕ್ಕೆ ನೀಡುವುದು ಅಮೆರಿಕಾ ಮುಂದಿರಿಸಿದ ಶಾಂತಿ ಪ್ರಸ್ತಾಪದಲ್ಲಿರುವ ಪ್ರಮುಖ ಸಮಸ್ಯೆಯಾಗಿದೆ ಎಂದ ಝೆಲೆನ್ಸ್ಕಿ, ಮಾತುಕತೆಯಲ್ಲಿ ಪಾಲ್ಗೊಂಡಿರುವ ಉಕ್ರೇನ್ ನ ನಿಯೋಗ ದೇಶಕ್ಕೆ ಮರಳಿ ವರದಿ ನೀಡಲಿದೆ. ಅದನ್ನು ಪರಿಶೀಲಿಸಿ ಮುಂದಿನ ನಡೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.







