ಲಕ್ಷಾಂತರ ಜನರನ್ನು ಹಸಿವಿನತ್ತ ತಳ್ಳಿದ ಮಧ್ಯಪ್ರಾಚ್ಯ ಸಂಘರ್ಷ: ವಿಶ್ವಸಂಸ್ಥೆ ಕಳವಳ

Photo Credit : news.un.org
ಜಿನೆವಾ: ಹೆಚ್ಚುತ್ತಿರುವ ಇಂಧನ ಮತ್ತು ಸಾರಿಗೆ ವೆಚ್ಚಗಳಿಂದ ಆಹಾರದ ಬೆಲೆ ಗಗನಕ್ಕೇರಿರುವಂತೆಯೇ ಮಧ್ಯಪ್ರಾಚ್ಯ ಸಂಘರ್ಷವು ಲಕ್ಷಾಂತರ ಜನರನ್ನು ಹಸಿವಿನ ದುರಂತದತ್ತ ತಳ್ಳುತ್ತಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಕಾರ್ಯಕ್ರಮ (ಡಬ್ಲ್ಯೂಇಎಫ್) ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
ಫೆಬ್ರವರಿಯಲ್ಲಿ ಇರಾನ್ನ ಮೇಲೆ ಅಮೆರಿಕ ಮತ್ತು ಇಸ್ರೇಲ್ನ ಜಂಟಿ ದಾಳಿಯು ಗಲ್ಫ್ ನಾದ್ಯಂತ ಮತ್ತು ಲೆಬನಾನ್ನಾದ್ಯಂತ ಪ್ರಾದೇಶಿಕ ಸಂಘರ್ಷವನ್ನು ಪ್ರಚೋದಿಸಿದ್ದು ಹಾರ್ಮುಝ್ ಜಲಸಂಧಿ ಸೇರಿದಂತೆ ಪ್ರಮುಖ ಹಡಗು ಮಾರ್ಗಗಳನ್ನು ಅಡ್ಡಿಪಡಿಸಿತು ಮತ್ತು ಜಾಗತಿಕ ಇಂಧನ ಹರಿವು ಮತ್ತು ಪೂರೈಕೆ ಸರಪಳಿಗಳನ್ನು ತೀವ್ರವಾಗಿ ನಿರ್ಬಂಧಿಸಿದೆ. ಜೂನ್ ವೇಳೆಗೆ ತೈಲ ಬೆಲೆ ಪ್ರತೀ ಬ್ಯಾರೆಲ್ಗೆ 100 ಡಾಲರ್ ಗೆ ಏರಿದ್ದರೆ 4.5 ಕೋಟಿ ಜನರು ತೀವ್ರ ಆಹಾರ ಅಭದ್ರತೆಗೆ ಸಿಲುಕಬಹುದು ಎಂದು ಮಾರ್ಚ್ನಲ್ಲಿ ಡಬ್ಯ್ಲೂಇಎಫ್ ಮುನ್ಸೂಚನೆ ನೀಡಿತ್ತು.
ಮಾರ್ಚ್ ಆರಂಭದಿಂದಲೂ ಬೆಂಚ್ಮಾರ್ಕ್ ಕಚ್ಛಾತೈಲದ ಬೆಲೆಗಳು ಈ ಮಟ್ಟಕ್ಕಿಂತ ಹೆಚ್ಚಿರುವುದರಿಂದ ಆ ಅಪಾಯ ಈಗ ಸನ್ನಿಹಿತವಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ. ಗಂಭೀರ ಪರಿಣಾಮಕ್ಕೆ ಒಳಗಾದವರಲ್ಲಿ ಅಫ್ಘಾನಿಸ್ತಾನ, ಸೊಮಾಲಿಯಾ ಮತ್ತು ಶ್ರೀಲಂಕಾದ ಕುಟುಂಬಗಳು ಸೇರಿವೆ. ಹೆಚ್ಚಿನ ಇಂಧನ ವೆಚ್ಚಗಳು, ಆಹಾರದ ಬೆಲೆಯೇರಿಕೆ, ಆದಾಯ ನಷ್ಟ ಮತ್ತು ವ್ಯಾಪಾರಕ್ಕೆ ಅಡಚಣೆಯಿಂದಾಗಿ ಸಮಸ್ಯೆ ಬಿಗಡಾಯಿಸಿದೆ. ಸೊಮಾಲಿಯಾದಲ್ಲಿ ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು, ಅಂದರೆ 6.5 ದಶಲಕ್ಷ ಜನತೆ ತೀವ್ರ ಆಹಾರದ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ. ಅಫ್ಘಾನಿಸ್ತಾನದಲ್ಲಿ 1 ಕೋಟಿ 74 ಲಕ್ಷ ಜನರಿಗೆ ಆಹಾರದ ಕೊರತೆ ಎದುರಾಗಿದೆ. ಅಡೆತಡೆಗಳು ಮುಂದುವರಿದರೆ ಮತ್ತು ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿರುವುದರಿಂದ ಹೆಚ್ಚುವರಿ 2.5 ದಶಲಕ್ಷ ಸೊಮಾಲಿಗಳು ಮತ್ತು 2.3 ದಶಲಕ್ಷ ಅಫ್ಘನ್ನರು ಆಹಾರ ಅಭದ್ರತೆಗೆ ಸಿಲುಕುವ ಅಪಾಯವಿದೆ ( ಈ ಎರಡೂ ದೇಶಗಳು ಆಮದು ಮಾಡಿಕೊಳ್ಳುವ ಇಂಧನ ಮತ್ತು ಆಹಾರದ ಮೇಲೆ ಅವಲಂಬಿತವಾಗಿದೆ) ಎಂದು ಡಬ್ಯ್ಲೂಇಎಫ್ ವರದಿ ತಿಳಿಸಿದೆ.
ನೆರವು ಒದಗಿಸುವ ಏಜೆನ್ಸಿಗಳು ಅನುದಾನದ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲೇ ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಬಣಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನಿಧಿಯ ಕೊರತೆಯಿಂದಾಗಿ 2026ರಲ್ಲಿ 1.5 ದಶಲಕ್ಷ ಜನರು ನೆರವು ಪಡೆಯುವುದರಿಂದ ವಂಚಿತರಾಗಿದ್ದರೆ ಪರಿಸ್ಥಿತಿ ಇನ್ನೂ 6 ತಿಂಗಳು ಮುಂದುವರಿದರೆ ಹೆಚ್ಚುವರಿ 9 ದಶಲಕ್ಷ ಜನರು ಈ ಸಾಲಿಗೆ ಸೇರಲಿದ್ದಾರೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಕಳವಳ ವ್ಯಕ್ತಪಡಿಸಿದೆ.
ಹಾರ್ಮುಝ್ ಬಿಕ್ಕಟ್ಟಿನ ಪರಿಣಾಮ:
ಅತ್ಯಂತ ಆಯಕಟ್ಟಿನ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ಹಸಿವಿನ ಪ್ರಮಾಣ ಹೆಚ್ಚಲು ಪ್ರಮುಖ ಕಾರಣವಾಗಿದೆ. ದುರದೃಷ್ಟವಶಾತ್, ಈ ವರ್ಷದ ಆರಂಭದಲ್ಲಿ ಮಾಡಿದ್ದ ನಿರಾಶವಾದಿ ಮುನ್ಸೂಚನೆಗಳು ಜಾರಿಗೆ ಬರುತ್ತಿವೆ ಮತ್ತು ನಾವು ತಕ್ಷಣ ಕಾರ್ಯನಿರ್ವಹಿಸುವ ಅಗತ್ಯವಿದೆ. ಸೊಮಾಲಿಯಾದಲ್ಲಿ ಆಹಾರ ವಿತರಣೆಯನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಿದೆ. ಆಹಾರ ಭದ್ರತೆಯ ದಿಗಂತದಲ್ಲಿ ನಿರಾಶೆಯ ಕಾರ್ಮೋಡ ಆವರಿಸುತ್ತಿದೆ ಎಂದು ವಿಶ್ವ ಆರೋಗ್ಯ ಕಾರ್ಯಕ್ರಮದ ಆಹಾರ ಮತ್ತು ಪೌಷ್ಠಿಕಾಂಶ ವಿಶ್ಲೇಷಣೆ ಸೇವೆಯ ನಿರ್ದೇಶಕ ಜೀನ್-ಮಾರ್ಟಿನ್ ಬೌವರ್ ಹೇಳಿದ್ದಾರೆ.






