ಪಶ್ಚಿಮದಂಡೆಯಲ್ಲಿ ಇಸ್ರೇಲ್ನಿಂದ ಅನಗತ್ಯ ಬಲಪ್ರಯೋಗ : ವಿಶ್ವಸಂಸ್ಥೆ ಖಂಡನೆ
ನಿರಾಯುಧರ ಮೇಲೆ ಮಾರಣಾಂತಿಕ ಶಕ್ತಿ ಬಳಕೆಗೆ ಕಳವಳ

PC : news.un.org
ಜಿನೆವಾ: ಯುದ್ಧದ ಹೋರಾಟಕ್ಕಾಗಿ ಅಭಿವೃದ್ಧಿಪಡಿಸಿದ ವಿಧಾನಗಳನ್ನು ಒಳಗೊಂಡಂತೆ ಪಶ್ಚಿಮದಂಡೆಯಲ್ಲಿ ಈ ವಾರ ತನ್ನ ದಾಳಿಯ ಸಮಯದಲ್ಲಿ ಇಸ್ರೇಲಿ ಮಿಲಿಟರಿಯ ಬಲದ ಬಳಕೆಯ ಬಗ್ಗೆ ವಿಶ್ವಸಂಸ್ಥೆಯು ಶುಕ್ರವಾರ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಗಾಝಾದಲ್ಲಿ ಹಮಾಸ್ ಜತೆಗಿನ ಯುದ್ಧದಲ್ಲಿ ಕದನ ವಿರಾಮ ಜಾರಿಗೊಂಡ ಎರಡು ದಿನಗಳಲ್ಲೇ ಇಸ್ರೇಲಿ ಮಿಲಿಟರಿ ಪಶ್ಚಿಮದಂಡೆಯ ಜೆನಿನ್ ಪ್ರದೇಶದಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಿದೆ.
`ಆಕ್ರಮಿತ ಪಶ್ಚಿಮದಂಡೆಯ ಜೆನಿನ್ನಲ್ಲಿ ಮಾರಣಾಂತಿಕ ಶಕ್ತಿಯ ಬಳಕೆಯ ಬಗ್ಗೆ ವಿಶ್ವಸಂಸ್ಥೆ ಕಳವಳಗೊಂಡಿದೆ' ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿಯ ವಕ್ತಾರ ಥಾಮೀನ್ ಅಲ್-ಖತನ್ ಜಿನೆವಾದಲ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಸ್ರೇಲ್ನ ಮಾರಣಾಂತಿಕ ಕಾರ್ಯಾಚರಣೆಗಳು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ಕಾನೂನು ಜಾರಿ ಕಾರ್ಯಾಚರಣೆಗಳಿಗೆ ಅನ್ವಯವಾಗುವ ಮಾನದಂಡಗಳು, ಮಾನದಂಡಗಳನ್ನು ಉಲ್ಲಂಘಿಸಿ ಯುದ್ಧದ ಹೋರಾಟಕ್ಕಾಗಿ ಅಭಿವೃದ್ಧಿಪಡಿಸಿದ ವಿಧಾನಗಳು ಹಾಗೂ ಅನವಶ್ಯಕ ಮತ್ತು ಅಸಮಾನ ಪ್ರಮಾಣದಲ್ಲಿ ಬಲ ಬಳಕೆಯ ಗಂಭೀರ ಕಳವಳಕ್ಕೆ ಕಾರಣವಾಗಿದೆ. ಭೀಕರ ವೈಮಾನಿಕ ದಾಳಿಗಳ ಜತೆಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಪ್ರಯತ್ನಿಸುವ ನಿಶ್ಯಸ್ತ್ರ ನಿವಾಸಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಮಂಗಳವಾರದಿಂದ ಇಸ್ರೇಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಕನಿಷ್ಟ 12 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 40 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ನಿರಾಯುಧರಾಗಿದ್ದರು ಎಂಬ ವರದಿಯನ್ನು ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿ ಪರಿಶೀಲಿಸಿದೆ. ಕಾನೂನುಬಾಹಿರ ಹತ್ಯೆಗಳಿಗೆ ಹೊಣೆಗಾರರನ್ನು ಗುರುತಿಸಿ ಅವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖತನ್ ಆಗ್ರಹಿಸಿದ್ದಾರೆ.
ಗಾಝಾ ಕದನ ವಿರಾಮ ಒಪ್ಪಂದ ಘೋಷಣೆಯಾದ ಬಳಿಕ ಪಶ್ಚಿಮದಂಡೆಯಲ್ಲಿರುವ ಇಸ್ರೇಲಿ ವಸಾಹತುಗಾರರು ಫೆಲೆಸ್ತೀನಿಯನ್ ಗ್ರಾಮಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ವಾಹನಗಳಿಗೆ ಕಲ್ಲೆಸೆಯುತ್ತಿದ್ದಾರೆ. ಮನೆಗಳು ಮತ್ತು ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಜತೆಗೆ, ಪಶ್ಚಿಮದಂಡೆಯಲ್ಲಿ ವಸಾಹತುಗಳನ್ನು ಇನ್ನೂ ವಿಸ್ತರಿಸುವ ಯೋಜನೆಗಳ ಕುರಿತು ಕೆಲವು ಇಸ್ರೇಲಿ ಅಧಿಕಾರಿಗಳ ಪುನರಾವರ್ತಿತ ಹೇಳಿಕೆಗಳ ಬಗ್ಗೆ ಕಳವಳಗೊಂಡಿದ್ದೇವೆ. ಆಕ್ರಮಿತ ಪ್ರದೇಶಕ್ಕೆ ತನ್ನ ನಾಗರಿಕ ಸಮುದಾಯವನ್ನು ವರ್ಗಾಯಿಸುವುದು ಯುದ್ಧಾಪರಾಧವಾಗುತ್ತದೆ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದವರು ಹೇಳಿದ್ದು ಪಶ್ಚಿಮ ದಂಡೆಯಲ್ಲಿನ ಹಿಂಸಾಚಾರವನ್ನು ತಕ್ಷಣ ಅಂತ್ಯಗೊಳಿಸುವಂತೆ ಆಗ್ರಹಿಸಿದ್ದಾರೆ.
ಅಂತರಾಷ್ಟ್ರೀಯ ಕಾನೂನು ಹಾಗೂ ಮಾನವ ಹಕ್ಕುಗಳ ನಿಯಮವನ್ನು ಇಸ್ರೇಲ್ ಪಾಲಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಒತ್ತಾಯಿಸಿದ್ದಾರೆ.







