ಫೆಲೆಸ್ತೀನ್ಗೆ ಪೂರ್ಣಪ್ರಮಾಣದ ಸದಸ್ಯತ್ವ | ಒಮ್ಮತದ ನಿಲುವಿಗೆ ಭದ್ರತಾ ಮಂಡಳಿ ವಿಫಲ
![ಫೆಲೆಸ್ತೀನ್ಗೆ ಪೂರ್ಣಪ್ರಮಾಣದ ಸದಸ್ಯತ್ವ | ಒಮ್ಮತದ ನಿಲುವಿಗೆ ಭದ್ರತಾ ಮಂಡಳಿ ವಿಫಲ ಫೆಲೆಸ್ತೀನ್ಗೆ ಪೂರ್ಣಪ್ರಮಾಣದ ಸದಸ್ಯತ್ವ | ಒಮ್ಮತದ ನಿಲುವಿಗೆ ಭದ್ರತಾ ಮಂಡಳಿ ವಿಫಲ](https://www.varthabharati.in/h-upload/2024/04/12/1260191-8299cf41-f2a0-44a8-a9a2-240a1069577d.webp)
ವಿಶ್ವಸಂಸ್ಥೆ ಭದ್ರತಾ ಮಂಡಳಿ | Photo : PTI
ವಿಶ್ವಸಂಸ್ಥೆ: ಫೆಲೆಸ್ತೀನ್ಗೆ ವಿಶ್ವಸಂಸ್ಥೆಯ ಪೂರ್ಣಪ್ರಮಾಣದ ಸದಸ್ಯತ್ವ ಕಲ್ಪಿಸುವ ಪ್ರಸ್ತಾವನೆಯ ಬಗ್ಗೆ ಒಮ್ಮತಕ್ಕೆ ಬರಲು ಸದಸ್ಯ ದೇಶಗಳು ವಿಫಲವಾಗಿದ್ದು ಇದೀಗ ಈ ಪ್ರಸ್ತಾವನೆಯ ಕುರಿತು ಎಪ್ರಿಲ್ 18ರಂದು ಔಪಚಾರಿಕ ಮತದಾನ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
2012ರಿಂದಲೂ ವಿಶ್ವಸಂಸ್ಥೆಯಲ್ಲಿ ವೀಕ್ಷಕ ಸ್ಥಾನಮಾನ ಪಡೆದಿರುವ ಫೆಲೆಸ್ತೀನ್ ಪೂರ್ಣಪ್ರಮಾಣದ ಸದಸ್ಯತ್ವಕ್ಕಾಗಿ ಹಲವು ವರ್ಷಗಳಿಂದ ಪ್ರಯತ್ನ ಮುಂದುವರಿಸಿದೆ. ವಿಶ್ವಸಂಸ್ಥೆಯ ಪೂರ್ಣಪ್ರಮಾಣದ ಸದಸ್ಯತ್ವ ಕೋರುವ ಯಾವುದೇ ಪ್ರಸ್ತಾವನೆಯು ಮೊದಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಂಗೀಕಾರ ಪಡೆಯಬೇಕಿದೆ. ಆದರೆ ಇಸ್ರೇಲ್ನ ಮಿತ್ರದೇಶ ಅಮೆರಿಕವು ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವುದರಿಂದ ಫೆಲೆಸ್ತೀನ್ನ ಆಶಯಕ್ಕೆ ತೊಡಕಾಗುತ್ತಿದೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಯ ಸಮಯದಲ್ಲೇ, ವಿಶ್ವಸಂಸ್ಥೆ ಸದಸ್ಯತ್ವ ಕೋರಿ ತಾನು 2011ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸುವಂತೆ ಕಳೆದ ವಾರ ಫೆಲೆಸ್ತೀನ್ ಮನವಿ ಮಾಡಿತ್ತು. ಮನವಿಯ ಬಗ್ಗೆ ಭದ್ರತಾ ಮಂಡಳಿಯ ತಾತ್ಕಾಲಿಕ ಸಮಿತಿ ಗುರುವಾರ ನಡೆಸಿದ ಸಭೆಯಲ್ಲಿ ಒಮ್ಮತದ ನಿಲುವಿಗೆ ಬರಲು ಸಾಧ್ಯವಾಗಿಲ್ಲ . ಆದರೂ ಮೂರನೇ ಒಂದರಷ್ಟು ಸದಸ್ಯರು ಪ್ರಸ್ತಾವನೆಯನ್ನು ಬೆಂಬಲಿಸಿದ್ದಾರೆ ಎಂದು ಮಾಲ್ಟಾ ದೇಶದ ರಾಯಭಾರಿ ವ್ಯನೆಸಾ ಫ್ರೇಝಿಯರ್ ಹೇಳಿದ್ದಾರೆ. ಒಮ್ಮತದ ನಿರ್ಧಾರಕ್ಕೆ ಬಂದರೆ ಮಾತ್ರ ತಾತ್ಕಾಲಿಕ ಸಮಿತಿ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಿರುವುದರಿಂದ ಇದೀಗ ಪ್ರಸ್ತಾವನೆಯನ್ನು ಭದ್ರತಾ ಮಂಡಳಿಯಲ್ಲಿ ಮತದಾನಕ್ಕೆ ಹಾಕುವ ಸಾಧ್ಯತೆಯಿದೆ.
ತಾತ್ಕಾಲಿಕ ಸಮಿತಿಯಲ್ಲಿ ಅರಬ್ ದೇಶಗಳನ್ನು ಪ್ರತಿನಿಧಿಸುವ ಅಲ್ಜೀರಿಯಾ ಮಂಡಿಸಿರುವ ಪ್ರಸ್ತಾವನೆಯ ಬಗ್ಗೆ ಎಪ್ರಿಲ್ 18ರಂದು ಭದ್ರತಾ ಮಂಡಳಿಯಲ್ಲಿ ಮತದಾನ ನಡೆಯುವ ನಿರೀಕ್ಷೆಯಿದೆ. ಇಲ್ಲಿ 15 ಸದಸ್ಯರಲ್ಲಿ 9 ಸದಸ್ಯರು ನಿರ್ಣಯದ ಪರ ಮತ ಚಲಾಯಿಸಿದರೆ ಬಹುಮತ ದೊರಕುತ್ತದೆ, ಆದರೆ ಅಮೆರಿಕ ವೀಟೊ ಚಲಾಯಿಸಿದರೆ ನಿರ್ಣಯ ಬಿದ್ದುಹೋಗುತ್ತದೆ. ಫೆಲೆಸ್ತೀನ್ನ ರಾಷ್ಟ್ರತ್ವದ ಅಭಿಯಾನ ನಡೆಸಲು ವಿಶ್ವಸಂಸ್ಥೆ ವೇದಿಕೆಯಲ್ಲ ಎಂದು ಅಮೆರಿಕ ಪ್ರತಿಪಾದಿಸುತ್ತಿದೆ. . `ಎಲ್ಲಾ ರಾಷ್ಟ್ರಗಳ ಸಮುದಾಯದಲ್ಲಿ ನಮ್ಮ ಯುಕ್ತವಾದ ಸ್ಥಾನವನ್ನು ನಾವು ಕೇಳುತ್ತಿದ್ದೇವೆ' ಎಂದು ವಿಶ್ವಸಂಸ್ಥೆಗೆ ಫೆಲೆಸ್ತೀನ್ ಪ್ರತಿನಿಧಿ ರಿಯಾದ್ ಮನ್ಸೂರ್ ಹೇಳಿದ್ದಾರೆ.