2025ರ ವರ್ಷಾಂತ್ಯದೊಳಗೆ ಭಾರತದ ಜನಸಂಖ್ಯೆ 146 ಕೋಟಿ ತಲುಪಲಿದೆ : ವಿಶ್ವಸಂಸ್ಥೆ ವರದಿ
ಫರ್ಟಿಲಿಟಿ ದರ ಭಾರೀ ಕುಸಿತದ ಬಗ್ಗೆ ಕಳವಳ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: 2025ರೊಳಗೆ ಭಾರತದ ಜನಸಂಖ್ಯೆಯು 146 ಕೋಟಿ ಆಗಲಿದ್ದು, ಜಗತ್ತಿನಲ್ಲೇ ಗರಿಷ್ಠವಾಗಿದೆಯೆಂದು ವಿಶ್ವಸಂಸ್ಥೆಯ ನೂತನ ಜನಸಂಖ್ಯಾ ವರದಿ (ಯುಎನ್ಎಫ್ಪಿಎ) ತಿಳಿಸಿದೆ. ಇದೇ ಸಂದರ್ಭದಲ್ಲಿ ದೇಶದ ಒಟ್ಟು ಫಲವಂತಿಕೆ (ಫರ್ಟಿಲಿಟಿ) ದರ ಸರಿಪಡಿಸಲಾಗದಷ್ಟು ಮಟ್ಟಕ್ಕೆ ಕುಸಿದಿದೆಯೆಂದು ಅದು ಕಳವಳ ವ್ಯಕ್ತಪಡಿಸಿದೆ.
ಒಟ್ಟು ಫಲವಂತಿಕೆ ದರ ಕುಸಿತದ ಬಗ್ಗೆ ಗಾಬರಿಪಡುವ ಬದಲು ಸಂತಾನೊತ್ಪತ್ತಿ ಗುರಿಗಳನ್ನು ಈಡೇರಿಸುವ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದು ಯುಎನ್ಎಫ್ಪಿಎನ 2025ನೇ ಸಾಲಿನ ವಿಶ್ವ ಜನಸಂಖ್ಯಾ (ಎಸ್ಓಡಬ್ಲ್ಯುಪಿ) ವರದಿ ತಿಳಿಸಿದೆ. ಕೋಟ್ಯಂತರ ಜನರಿಗೆ ನೈಜ ಸಂತಾನೋತ್ಪತ್ತಿ ಅಥವಾ ಪ್ರಜನನ ಗುರಿಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವರದಿ ದೃಢಪಡಿಸಿದೆ.
ಫಲವಂತಿಕೆಯ ಕೊರತೆಯೇ ನೈಜವಾದ ಬಿಕ್ಕಟ್ಟಾಗಿದೆಯೇ ಹೊರತು ಕಡಿಮೆ ಜನಸಂಖ್ಯೆ ಅಥವಾ ಅತಿಯಾದ ಜನಸಂಖ್ಯೆಯು ಬಿಕ್ಕಟ್ಟಾಗಿ ಉಳಿದಿಲ್ಲವೆಂದು ವರದಿ ಬೆಟ್ಟು ಮಾಡಿ ತೋರಿಸಿದೆ.
ಜನಸಂಖ್ಯಾ ಸಂರಚನೆ, ಫಲವಂತಿಕೆ ಹಾಗೂ ಜೀವಿತಾವಧಿಯಲ್ಲಿನ ಸ್ಥಿತ್ಯಂತರಗಳಿಂದಾಗಿ ಜನಸಂಖ್ಯಾ ಸ್ವರೂಪದಲ್ಲಿ ಮಹತ್ವದ ಬದಲಾವಣೆಯಾಗುತ್ತದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಪ್ರತಿ ಮಹಿಳೆಯ ಸರಾಸರಿ ಫಲವಂತಿಕೆ ದರವು 2.1 ಇದ್ದುದು ಈಗ 1.9ಕ್ಕೆ ಕುಸಿದಿದೆ. ಅಂದರೆ ತಲೆಮಾರಿನಿಂದ ತಲೆಮಾರಿಗೆ ಜನಸಂಖ್ಯೆಯ ಗಾತ್ರವನ್ನು ಕಾಪಾಡಲು ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯ ಭಾರತೀಯ ಮಹಿಳೆಯರಲ್ಲಿ ಕುಸಿಯುತ್ತಿದೆ.
ಜನನ ಪ್ರಮಾಣದ ದರ ಕುಂಠಿತಗೊಂಡಿರುವ ಹೊರತಾಗಿಯೂ ಭಾರತದ ಯುವಜನತೆ ಮಹತ್ವಪೂರ್ಣವಾಗಿ ಉಳಿದಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ 0-14ರೊಳಗಿನವರು ಶೇ.17ರಷ್ಟು ಮಂದಿ, 17-19ರವೆರೆಗಿನವರು ಶೇ.26ರಷ್ಟು ಮಂದಿ, ಶೇ 26ರಷ್ಟು ಮಂದಿ 10 ರಿಂದ 24 ವರ್ಷದೊಳಗಿನವರಾಗಿದ್ದಾರೆ.
ದೇಶದ ಒಟ್ಟು ಜನಸಂಖ್ಯೆಯ ಶೇ.68ರಷ್ಟು ಮಂದಿ ದುಡಿಯುವ ವರ್ಗದ ವಯಸ್ಸಿನವರಾಗಿದ್ದಾರೆ(15-64 ವರ್ಷ ). ಒಂದು ವೇಳೆ ಸಮರ್ಪಕ ಉದ್ಯೋಗ ಹಾಗೂ ನೀತಿಗಳ ಮೂಲಕ ಸರಕಾರ ಅವರಿಗೆ ಬೆಂಬಲವಾದಲ್ಲಿ ಅವರು ದೇಶಕ್ಕೆ ಸಂಪನ್ಮೂಲವಾಗಲಿದ್ದಾರೆ ಎಂದು ವರದಿ ಹೇಳಿದೆ.
ಭಾರತದ ವಯೋವೃದ್ಧ ಜನಸಂಖ್ಯೆಯು (65 ವರ್ಷ ಹಾಗೂ ಅದಕ್ಕಿಂತ ಹಿರಿಯ ವಯಸ್ಸಿನವರು) ದೇಶದ ಒಟ್ಟು ಜನಸಂಖ್ಯಾ ಬಲದ ಶೇ.5.7ರಷ್ಟಿದ್ದಾರೆ. 2025ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿಯು ಪುರುಷರಿಗೆ 71 ವರ್ಷ ಹಾಗೂ ಮಹಿಳೆಯರಿಗೆ 74 ವರ್ಷಗಳಾಗಿರುತ್ತವೆ.
ವಿಶ್ವಸಂಸ್ಥೆ ಅಂದಾಜಿನ ಪ್ರಕಾರ ಪ್ರಸಕ್ತ ಭಾರತದ ಒಟ್ಟು ಜನಸಂಖ್ಯೆ 146.39 ಕೋಟಿ ಆಗಿದೆ. ಭಾರತವು ಪ್ರಸಕ್ತ ಜಗತ್ತಿನ ಅತ್ಯಧಿಕ ಜನಸಂಖ್ಯೆಯಿರುವ ರಾಷ್ಟ್ರವಾಗಿದೆ. ಈ ಸಂಖ್ಯೆಯು 170 ಕೋಟಿವರೆಗೆ ಏರಿಕೆಯಾಗಲಿದ್ದು, ಈಗಿನಿಂದ 40 ವರ್ಷಗಳ ಬಳಿಕ ಅದು ಕುಸಿಯುವ ನಿರೀಕ್ಷೆಯಿದೆ.
1960ರಲ್ಲಿ ಭಾರತದ ಜನಸಂಖ್ಯೆ 43.60 ಕೋಟಿ ಆಗಿತ್ತು. ಆಗ ಸರಾಸರಿ ಓರ್ವ ಮಹಿಳೆಗೆ ಆರು ಮಕ್ಕಳಿದ್ದವು. ಅಂದಿನ ಕಾಲಗಳಲ್ಲಿ ಸರಾಸರಿ ಪ್ರತಿ ನಾಲ್ಕು ಮಂದಿಯಲ್ಲಿ ಒಬ್ಬರಿಗಿಂತಲೂ ಕಡಿಮೆ ಮಂದಿ ಮಾತ್ರವೇ ಗರ್ಭನಿರೋಧ ಸಾಧನಗಳ ನೆರವು ಪಡೆಯುತ್ತಿದ್ದರು. ಪ್ರತಿ ಇಬ್ಬರಲ್ಲಿ ಒಬ್ಬರು ಪ್ರಾಥಮಿಕ ಶಾಲೆಗಳಿಗೆ ಹೋಗುತ್ತಿದ್ದರು.