ಭಾರತೀಯ ಬುಡಕಟ್ಟು ಜನರ ಹಕ್ಕುಗಳ ಕುರಿತ ವಿಶ್ವಸಂಸ್ಥೆ ವರದಿ ಆಧಾರರಹಿತ: ಭಾರತ ಖಂಡನೆ

ಅನುಜ್ ಸ್ವರೂಪ್ | Photo Credit : ANI
ಹೊಸದಿಲ್ಲಿ,ಅ.14: ಭಾರತದ ಬುಡಕಟ್ಟು ಜನರ ಹಕ್ಕುಗಳ ಕುರಿತು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯವರು ಇತ್ತೀಚೆಗೆ ಪ್ರಕಟಿಸಿದ ವರದಿಯನ್ನು ಭಾರತವು ಬುಧವಾರ ಬಲವಾಗಿ ಖಂಡಿಸಿದ್ದು, ಆಧಾರರಹಿತವೆಂದು ಟೀಕಿಸಿದೆ. ವಿಶ್ವಸಂಸ್ಥೆಯ ಮಹಾಸಭೆಯ 81ನೇ ಅಧಿವೇಶನದಲ್ಲಿ ಮಾತನಾಡಿದ ಭಾರತದ ಪ್ರಥಮ ಕಾರ್ಯದರ್ಶಿ ಅನುಜ್ ಸ್ವರೂಪ್ ಅವರು ಬುಡಕಟ್ಟು ಜನರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಭಾರತ ಸರಕಾರವು ರೂಪಿಸಿರುವ ಕಾನೂನು ಚೌಕಟ್ಟುಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಭಾರತದ ಸಾಂವಿಧಾನಿಕ ಕಾನೂನುಗಳು ಬುಡಕಟ್ಟು ಸಮುದಾಯಗಳಿಗೆ ಗಣನೀಯವಾದ ನೈಜ ಹಕ್ಕುಗಳನ್ನು ನೀಡುತ್ತಿಲ್ಲ, ಕೇವಲ ಆಡಳಿತಾತ್ಮಕವಾಗಿ ಅವರ ವರ್ಗೀಕರಣವನ್ನಷ್ಟೇ ಮಾಡುತ್ತಿದೆಯೆಂದು 2025ರ ಆಗಸ್ಟ್ ನಲ್ಲಿ ಪ್ರಕಟವಾದ ವಿಶ್ವಸಂಸ್ತೆಯ ವರದಿಯೊಂದು ಅಸಮಾಧಾನ ವ್ಯಕ್ತಪಡಿಸಿತ್ತು. ಅಧಿವೇಶನದಲ್ಲಿ ಈ ವರದಿಯನ್ನು ತಳ್ಳಿಹಾಕಿದ ಅನುಜ್ ಸ್ವರೂಪ್ ಅವರು, 2006ರ ಮಹತ್ವದ ಅರಣ್ಯ ಹಕ್ಕುಗಳ ಕಾಯ್ದೆಯಡಿ, ಅರಣ್ಯಪ್ರದೇಶಗಳಲ್ಲಿ ವಾಸಿಸಲು ಅರ್ಹ ಬುಡಕಟ್ಟು ಜನರಿಗೆ ಇರುವ ಹಕ್ಕುಗಳಿಗೆ ಮಾನ್ಯತೆ ನೀಡಿರುವುದನ್ನು ಉಲ್ಲೇಖಿಸಿದರು ಹಾಗೂ ಕಾಯ್ದೆಯಡಿಯಲ್ಲಿ ಅವರಿಗೆ ನೀಡಿರುವ ಜಮೀನು ಹಾಗೂ ಅರಣ್ಯ ಸಂಪನ್ಮೂಲಗಳ ಒಡೆತನದ ನಿಖರ ಅಂಕಿಅಂಶಗಳನ್ನು ಸಭೆಯ ಮುಂದಿರಿಸಿದರು. ‘ ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಕಾರ್ಯಕ್ರಮದಡಿ ಭಾರತ ಸರಕಾರ ರೂಪಿಸಿರುವ ಕಲ್ಯಾಣ ಕಾರ್ಯಕ್ರಮಗಳು ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಸರಕಾರದ ಬದ್ಧತೆಯನ್ನು ಸಾಬೀತುಪಡಿಸುತ್ತವೆ ಎಂದು ಅನುಜ್ ಸ್ವರೂಪ್ ತಿಳಿಸಿದರು.




