ಒಲಿಂಪಿಕ್ಸ್ ನಲ್ಲಿ ಹಿಜಾಬ್ ನಿಷೇಧಿಸಿದ ಫ್ರಾನ್ಸ್ ನಿರ್ಧಾರಕ್ಕೆ ವಿಶ್ವಸಂಸ್ಥೆ ಖಂಡನೆ

ಜಿನೆವಾ: ಒಲಿಂಪಿಕ್ಸ್ ನಲ್ಲಿ ಫ್ರಾನ್ಸ್ ನ ಕ್ರೀಡಾಪಟುಗಳು ಹಿಜಾಬ್ ಧರಿಸುವುದನ್ನು ನಿಷೇಧಿಸುವುದಾಗಿ ಫ್ರಾನ್ಸ್ ಸರಕಾರದ ಹೇಳಿಕೆಯನ್ನು ವಿಶ್ವಸಂಸ್ಥೆ ಖಂಡಿಸಿದ್ದು, ಮಹಿಳೆಯರಿಗೆ ಹೆಚ್ಚಿನ ವಸ್ತ್ರಸಂಹಿತೆಯನ್ನು ವಿರೋಧಿಸುವುದಾಗಿ ಒತ್ತಿಹೇಳಿದೆ.
ಜಾತ್ಯಾತೀತತೆಯ ಕುರಿತ ದೇಶದ ಕಟ್ಟುನಿಟ್ಟಿನ ನಿಯಮಗಳಿಗೆ ಅನುಗುಣವಾಗಿ 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫ್ರಾನ್ಸ್ ನ ಸ್ಪರ್ಧಾಳುಗಳು ಹಿಜಾಬ್ ಧರಿಸಲು ಅವಕಾಶ ನೀಡಲಾಗದು. ಕ್ರೀಡಾಕೂಟಗಳಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳ ಪ್ರದರ್ಶನವನ್ನು ಸರಕಾರ ವಿರೋಧಿಸುತ್ತದೆ ಎಂದು ಫ್ರಾನ್ಸ್ ನ ಕ್ರೀಡಾಸಚಿವೆ ಅಮಿಲಿಯ ಔದಿಯ-ಕ್ಯಾಸ್ಟೆರಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಮಾನವಹಕ್ಕುಗಳ ಘಟಕದ ವಕ್ತಾರೆ ಮಾರ್ತಾ ಹುರ್ತಾದೊ ‘ಒಬ್ಬ ಮಹಿಳೆ ಏನನ್ನು ಧರಿಸಬೇಕು ಅಥವಾ ಏನನ್ನು ಧರಿಸಬಾರದು ಎಂದು ಯಾರೂ ಹೇರಬಾರದು. ಒಂದು ಗುಂಪಿನ ವಿರುದ್ಧದ ತಾರತಮ್ಯದ ಕ್ರಮಗಳು ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡಬಹುದು. ಆದ್ದರಿಂದಲೇ ಧರ್ಮಗಳು ಅಥವಾ ನಂಬಿಕೆಗಳ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು (ಉದಾಹರಣೆಗೆ ಉಡುಪಿನ ಆಯ್ಕೆ) ನಿಜವಾಗಿಯೂ ನಿರ್ಧಿಷ್ಟ ಸಂದರ್ಭದಲ್ಲಿ ಮಾತ್ರ ಸ್ವೀಕಾರಾರ್ಹವಾಗಿವೆ’ ಎಂದು ಹೇಳಿದ್ದಾರೆ.





