ಹೂತಿಗಳ ಬಂಧನದಲ್ಲಿದ್ದ ವಿಶ್ವಸಂಸ್ಥೆಯ ಸಿಬ್ಬಂದಿ ಮೃತ್ಯು: ಮೃತದೇಹ ಹಸ್ತಾಂತರಕ್ಕೆ ಆಗ್ರಹ

ವೋಲ್ಕರ್ ಟರ್ಕ್
ಸನಾ: ಯೆಮೆನ್ ನಲ್ಲಿ ಹೂತಿಗಳ ಬಂಧನದಲ್ಲಿದ್ದ ವಿಶ್ವಸಂಸ್ಥೆಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಆಗ್ರಹಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಸಿಬ್ಬಂದಿಯ ಸಾವಿನ ಬಗ್ಗೆ ವಿಶ್ವಸಂಸ್ಥೆಗೆ ಮಾಹಿತಿ ಲಭಿಸಿ ಎರಡು ವಾರಗಳ ಬಳಿಕ ಈ ಬೇಡಿಕೆ ವ್ಯಕ್ತವಾಗಿದೆ.
ಮೊಹಮ್ಮದ್ ಅಲ್-ಶಮಿ ಅವರನ್ನು ಹೂತಿ ಗುಂಪು 2024ರ ಜೂನ್ 6ರಂದು ಬಂಧಿಸಿತ್ತು. ಅವರು ಮೃತಪಟ್ಟ ಒಂದು ತಿಂಗಳಿಗೂ ಹೆಚ್ಚು ಸಮಯದ ಬಳಿಕ, ಅ.30ರಂದು ಅವರ ಕುಟುಂಬಕ್ಕೆ ಸಾವಿನ ಸುದ್ದಿ ತಿಳಿಸಲಾಗಿತ್ತು. ಆದರೆ, ಅವರ ಸಾವಿಗೆ ಕಾರಣವೇನು ಮತ್ತು ಯಾವ ಸನ್ನಿವೇಶದಲ್ಲಿ ಅವರು ಮೃತಪಟ್ಟರು ಎಂಬ ಬಗ್ಗೆ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಲಾಗಿಲ್ಲ.
"ನಮ್ಮ ಸಹೋದ್ಯೋಗಿಯನ್ನು ಅವರ ಕುಟುಂಬದ ಇಚ್ಛೆಯಂತೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಬೇಕಿದೆ. ಅವರು ಬಂಧನದಲ್ಲಿದ್ದ ಕಳೆದ ಎರಡು ವರ್ಷಗಳಲ್ಲಿ, ಅವರ ಕುಟುಂಬಕ್ಕೆ ಅವರನ್ನು ಸಂಪರ್ಕಿಸಲು ಅವಕಾಶವನ್ನೇ ನೀಡಲಾಗಿರಲಿಲ್ಲ," ಎಂದು ಟರ್ಕ್ ಅವರ ಕಚೇರಿ ತಿಳಿಸಿದೆ.
ಅಲ್-ಶಮಿ ಅವರ ಸಾವಿನ ನಿಖರ ದಿನಾಂಕ, ಕಾರಣ ಮತ್ತು ಸನ್ನಿವೇಶಗಳನ್ನು ತಕ್ಷಣ ಬಹಿರಂಗಪಡಿಸಬೇಕು. ಅಲ್ಲದೆ, ಇದಕ್ಕೆ ಹೊಣೆಗಾರರಾದವರನ್ನು ಗುರುತಿಸಿ ಉತ್ತರದಾಯಿಗಳನ್ನಾಗಿಸಬೇಕು ಎಂದು ಟರ್ಕ್ ಹೂತಿಗಳನ್ನು ಒತ್ತಾಯಿಸಿದ್ದಾರೆ. ಸಾವಿನ ಕುರಿತು ತನಿಖೆ ನಡೆಸಲು ಹೂತಿಗಳು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ಅಲ್-ಶಮಿ ಅವರ ಕುಟುಂಬ ಈ ವಾರದ ಆರಂಭದಲ್ಲಿ ತಿಳಿಸಿತ್ತು.
ಇದೇ ವೇಳೆ, ಯೆಮೆನ್ ನಲ್ಲಿ ವಿಶ್ವಸಂಸ್ಥೆಯ 70ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಮಾನವೀಯ ನೆರವು ಕಾರ್ಯಕರ್ತರು ಇನ್ನೂ ಹೂತಿಗಳ ಬಂಧನದಲ್ಲಿದ್ದಾರೆ. ಈ ವಾರ ಪ್ರಸಾರವಾಗುತ್ತಿರುವ ವಿಡಿಯೋವೊಂದರಲ್ಲಿ ಬಂಧಿತರಲ್ಲಿ ಒಬ್ಬರು ತಪ್ಪೊಪ್ಪಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ ಎಂದು ಟರ್ಕ್ ಅವರ ಕಚೇರಿ ತಿಳಿಸಿದೆ. ಬಂಧಿತರಿಗೆ ಚಿತ್ರಹಿಂಸೆ ನೀಡುವ ಅಥವಾ ಅವರ ಮೇಲೆ ದುರ್ವರ್ತನೆ ತೋರಬಹುದು ಎಂಬ ಆತಂಕವನ್ನೂ ಟರ್ಕ್ ವ್ಯಕ್ತಪಡಿಸಿದ್ದಾರೆ.






