‘ಫೆಲೆಸ್ತೀನ್ ಆಕ್ಷನ್’ ಗುಂಪಿನ ವಿರುದ್ಧ ಅಮೆರಿಕದ ಕ್ರಮಕ್ಕೆ ವಿಶ್ವಸಂಸ್ಥೆ ಖಂಡನೆ

Photo Credit ; un.org
ವಿಶ್ವಸಂಸ್ಥೆ, ಆ. 28: ‘ಫೆಲೆಸ್ತೀನ್ ಆಕ್ಷನ್’ ಗುಂಪನ್ನು ಭಯೋತ್ಪಾದಕ ಸಂಸ್ಥೆ ಎಂದು ಟ್ರಂಪ್ ಆಡಳಿತ ಘೋಷಿಸಿರುವುದನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಗುರುವಾರ ಖಂಡಿಸಿದ್ದು, ಇದು ವಾಕ್ ಸ್ವಾತಂತ್ರ್ಯದ ಹಕ್ಕುಗಳ ಮೇಲಿನ ಅತಿಯಾದ ಮತ್ತು ಅನಗತ್ಯ ನಿರ್ಬಂಧವಾಗಿದೆ ಎಂದು ಹೇಳಿದೆ. ಅಲ್ಲದೆ, ‘ಭಯೋತ್ಪಾದನೆ’ ಪದದ ವ್ಯಾಪಕ ಬಳಕೆಯು ನಾಗರಿಕ ಹಕ್ಕುಗಳ ದಮನಕ್ಕೆ ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.
ಭಯೋತ್ಪಾದನಾ ವಿರೋಧಿ ಕ್ರಮಗಳ ಭಾಗವಾಗಿ ಹಾಗೂ ಎಡಪಂಥೀಯ ಗುಂಪುಗಳ ಮೇಲಿನ ಕ್ರಮದ ಅಂಗವಾಗಿ ‘ಫೆಲೆಸ್ತೀನ್ ಆಕ್ಷನ್’ ಅನ್ನು ಭಯೋತ್ಪಾದಕ ಗುಂಪು ಎಂದು ಅಮೆರಿಕ ಬುಧವಾರ ಘೋಷಿಸಿತ್ತು. ಇಸ್ರೇಲ್ ನ ವಿದೇಶಾಂಗ ಸಚಿವಾಲಯವು ಈ ನಿರ್ಧಾರವನ್ನು ಸ್ವಾಗತಿಸಿದೆ.
‘ಈ ತೀರ್ಮಾನವು ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಮಾವೇಶ ಮತ್ತು ಸಂಘಟನೆಯ ಹಕ್ಕುಗಳು ಹಾಗೂ ಸಾರ್ವಜನಿಕ ವ್ಯವಹಾರಗಳಲ್ಲಿ ಭಾಗವಹಿಸುವ ಹಕ್ಕಿನ ಮೇಲಿನ ಅತಿಯಾದ ಮತ್ತು ಅನಗತ್ಯ ನಿರ್ಬಂಧದಂತೆ ತೋರುತ್ತದೆ. ಭಯೋತ್ಪಾದನೆ ಎಂಬ ಪದದ ಅತಿಯಾದ ಬಳಕೆಯು ನಾಗರಿಕ ವಲಯದ ಮೇಲೆ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರ ಕಚೇರಿ ಕಳವಳ ವ್ಯಕ್ತಪಡಿಸಿದೆ.




