ಚಿತ್ರಹಿಂಸೆಯನ್ನು ಆಡಳಿತ ನೀತಿಯಾಗಿಸಿಕೊಂಡ ಇಸ್ರೇಲ್: ವಿಶ್ವಸಂಸ್ಥೆ ಸಮಿತಿ ವರದಿಯಲ್ಲಿ ಆರೋಪ

Photo Credit : United Nations
ವಿಶ್ವಸಂಸ್ಥೆ, ನ.30: ಇಸ್ರೇಲ್, ಅಲ್ಬೇನಿಯಾ, ಅರ್ಜೆಂಟೀನಾ ಮತ್ತು ಬಹ್ರೇನ್ ಕುರಿತ ತನ್ನ ಇತ್ತೀಚಿನ ವರದಿಯನ್ನು `ಚಿತ್ರಹಿಂಸೆಯ ವಿರುದ್ಧದ ವಿಶ್ವಸಂಸ್ಥೆ ಸಮಿತಿ(ಸಿಎಟಿ)' ಬಿಡುಗಡೆಗೊಳಿಸಿದ್ದು ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ ಅಥವಾ ಅವಮಾನಕರ ವಿಧಾನಗಳ ವಿರುದ್ಧದ ನಿರ್ಣಯಕ್ಕೆ ಪ್ರತೀ ದೇಶದ ಬದ್ಧತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಇಸ್ರೇಲ್ ನ ಕುರಿತ ವಿಸ್ತ್ರತ ಮೌಲ್ಯಮಾಪನದಲ್ಲಿ ಸಮಿತಿಯು ಗಂಭೀರ ಕಳವಳಕ್ಕೆ ಕಾರಣವಾದ ಹಲವು ಕ್ಷೇತ್ರಗಳನ್ನು, ವಿಶೇಷವಾಗಿ 2023ರ ಅಕ್ಟೋಬರ್ 7ರ ಬಳಿಕದ ಬೆಳವಣಿಗೆಯ ಬಗ್ಗೆ, ವಿವರಿಸಿದೆ.
►ಸಮಿತಿಯ ವರದಿಯ ಮುಖ್ಯಾಂಶಗಳು:
* ಸಮಿತಿಯು ಅಕ್ಟೋಬರ್ 7ರ ದಾಳಿಯನ್ನು ಖಂಡಿಸಿದೆ, ಆದರೆ ಇಸ್ರೇಲ್ ನ ಪ್ರತಿಕ್ರಿಯೆ ಅಸಮಾನವಾಗಿದೆ ಎಂದು ಟೀಕಿಸಿದೆ. ಹಮಾಸ್ ಮತ್ತು ಅದರೊಂದಿಗೆ ಗುರುತಿಸಿರುವ ಗುಂಪುಗಳು ಇಸ್ರೇಲ್ ವಿರುದ್ಧ ನಡೆಸಿದ ಆಕ್ರಮಣವನ್ನು ಸಮಿತಿ ಸ್ಪಷ್ಟವಾಗಿ ಖಂಡಿಸಿದ್ದು , ದಾಳಿಯಿಂದ ಉಂಟಾಗಿರುವ ಪ್ರಾಣಹಾನಿ, ದೈಹಿಕ ಮತ್ತು ಭಾವನಾತ್ಮಕ ಗಾಯಗಳಿಗೆ ಸಂತಾಪ ಸೂಚಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನ ಪ್ರತಿಕ್ರಿಯೆಯ ಅಸಮಂಜಸ ಸ್ವರೂಪದ ಬಗ್ಗೆ, ವ್ಯಾಪಕ ಸಾವು-ನೋವಿನ ಬಗ್ಗೆ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ.
* ಇಸ್ರೇಲ್ ನ ಬಂಧನ ಕೇಂದ್ರಗಳಲ್ಲಿನ ಕಳಪೆ ಪರಿಸ್ಥಿತಿಯ ಬಗ್ಗೆ ವರದಿ ಬೊಟ್ಟು ಮಾಡಿದೆ. ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವರು ಮತ್ತು ಇತರ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಇದು ಸಾಮೂಹಿಕ ಶಿಕ್ಷೆಯ ಉದ್ದೇಶಪೂರ್ವಕ ರಾಷ್ಟ್ರನೀತಿಯ ಪರಿಣಾಮವಾಗಿದೆ ಎಂದು ಹೇಳಿದೆ.
* ವ್ಯವಸ್ಥಿತ, ವ್ಯಾಪಕ ಚಿತ್ರಹಿಂಸೆಯ ವರದಿಯ ಬಗ್ಗೆ ಸಮಿತಿ ಎಚ್ಚರಿಕೆ ವ್ಯಕ್ತಪಡಿಸಿದೆ.
* ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಇಸ್ರೇಲ್ ನ ಕಾನೂನುಬಾಹಿರ ಉಪಸ್ಥಿತಿ ಮುಂದುವರಿದಿರುವ ಸಮಯದಲ್ಲಿ ಪರಿಚಯಿಸಲಾದ ಹಲವಾರು ನೀತಿಗಳು ಫೆಲೆಸ್ತೀನೀಯರಿಗೆ ಕ್ರೂರ, ಅಮಾನವೀಯ ಅಥವಾ ಅವಮಾನಕರ ಜೀವನ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ವರದಿ ಎಚ್ಚರಿಸಿದೆ.
* ಇಸ್ರೇಲ್ ನಲ್ಲಿ ಚಿತ್ರಹಿಂಸೆ ವಿರೋಧಿ ಕಾನೂನಿನ ಕೊರತೆ ಪ್ರಮುಖ ಕಾಳಜಿಯಾಗಿ ಉಳಿದಿದೆ. ಇಸ್ರೇಲ್ ನ ಕಾನೂನು `ಅಗತ್ಯ' ವಿಭಾಗದಡಿ ಸಾರ್ವಜನಿಕ ಅಧಿಕಾರಿಗಳಿಗೆ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಅನುಮತಿಸುತ್ತದೆ. ಇದನ್ನು ವಿಚಾರಣೆಯ ಸಮಯದಲ್ಲಿ ಕಾನೂನುಬಾಹಿರ ದೈಹಿಕ ಒತ್ತಡ ನೀಡುವುದನ್ನು ಸಮರ್ಥಿಸಿಕೊಳ್ಳಲು ಬಳಸಲಾಗುತ್ತದೆ.
ಬಂಧಿತರ ಸ್ವತಂತ್ರ ವೈದ್ಯಕೀಯ ಪರೀಕ್ಷೆ, ಬಂಧಿತರಿಗೆ ಚಿತ್ರಹಿಂಸೆ, ದೌರ್ಜನ್ಯದ ಆರೋಪಗಳ ಬಗ್ಗೆ ತನಿಖೆ ನಡೆಸುವುದು ಸೇರಿದಂತೆ ಸಮಿತಿಯು ಈ ಹಿಂದೆ ಮಾಡಿದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಇಸ್ರೇಲ್ ವಿಫಲವಾಗಿದೆ ಎಂದು ವರದಿ ಟೀಕಿಸಿದೆ.
► ಸ್ವತಂತ್ರ ತನಿಖಾ ಆಯೋಗ ಸ್ಥಾಪನೆಗೆ ಆಗ್ರಹ
ಪ್ರಸ್ತುತ ಸಂಘರ್ಷದ ಸಮಯದಲ್ಲಿ ಮಾಡಿದ ಚಿತ್ರಹಿಂಸೆ ಮತ್ತು ಅಮಾನವೀಯ ನಡವಳಿಕೆಯ ಎಲ್ಲಾ ಆರೋಪಗಳನ್ನೂ ತನಿಖೆ ನಡೆಸಲು ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಪರಿಣಾಮಕಾರಿ ತಾತ್ಕಾಲಿಕ ತನಿಖಾ ಆಯೋಗವನ್ನು ಸ್ಥಾಪಿಸುವಂತೆ ಸಮಿತಿಯು ಬಲವಾದ ಶಿಫಾರಸಿನಲ್ಲಿ ಇಸ್ರೇಲನ್ನು ಒತ್ತಾಯಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸೇರಿದಂತೆ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಗಾಝಾಕ್ಕೆ ಮಾನವೀಯ ನೆರವು ಮತ್ತು ಸಹಾಯ ಕಾರ್ಯಕರ್ತರ ತಕ್ಷಣದ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಮಿತಿಯು ಆಗ್ರಹಿಸಿದೆ.







