ಗಡಿಯಲ್ಲಿ ಅಫ್ಘಾನ್ ಭದ್ರತಾ ಪಡೆಯ ಅಪ್ರಚೋದಿತ ಗುಂಡಿನ ದಾಳಿ: ಇಬ್ಬರು ಪಾಕ್ ಪೌರರ ಮೃತ್ಯು

ಸಾಂದರ್ಭಿಕ ಚಿತ್ರ.
ಇಸ್ಲಮಾಬಾದ್: ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಅಫ್ಘಾನ್ನ ಭದ್ರತಾ ಪಡೆಯ ಸಿಬಂದಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ 12 ವರ್ಷದ ಬಾಲಕನ ಸಹಿತ ಇಬ್ಬರು ಪೌರರು ಮೃತಪಟ್ಟಿರುವುದಾಗಿ ಪಾಕ್ ಸೇನೆ ಹೇಳಿದೆ.
ಅಫ್ಘಾನ್-ಪಾಕ್ ನಡುವಿನ ಪ್ರಮುಖ ಗಡಿದಾಟು(ಬಾರ್ಡರ್ ಕ್ರಾಸಿಂಗ್) ಚಮನ್ ಕ್ರಾಸಿಂಗ್ ಪಾಯಿಂಟ್ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಸಂಜೆ `ಶೂನ್ಯರೇಖೆ'ಯಲ್ಲಿರುವ ಈ ಗಡಿದಾಟುವಿನಲ್ಲಿ ಸಂಚರಿಸುತ್ತಿದ್ದ ಜನರತ್ತ ಅಫ್ಘಾನ್ ಭದ್ರತಾಪಡೆಯ ಸಿಬಂದಿ ಏಕಾಏಕಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಬಾಲಕನ ಸಹಿತ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರತಿದಾಳಿ ಅಮಾಯಕ ಜನರ ಸಾವುನೋವಿಗೆ ಕಾರಣವಾಗಬಹುದು ಎಂದು ಪಾಕಿಸ್ತಾನದ ಸೇನೆ ಅತ್ಯಂತ ಸಂಯಮದಿಂದ ವರ್ತಿಸಿದೆ. ಇಂತಹ ಬೇಜವಾಬ್ದಾರಿಯ ಮತ್ತು ನಿರ್ಲಕ್ಷ್ಯದ ಕೃತ್ಯಕ್ಕೆ ಕಾರಣ ತಿಳಿಸುವಂತೆ ಅಫ್ಘಾನ್ ಅಧಿಕಾರಿಗಳನ್ನು ಆಗ್ರಹಿಸಲಾಗಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
ಅಫ್ಘಾನ್ ಸರಕಾರ ಗಡಿಯಲ್ಲಿರುವ ತನ್ನ ಸೇನಾಪಡೆಯನ್ನು ನಿಯಂತ್ರಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಬೇಜವಾಬ್ದಾರಿಯ ಕೃತ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಇಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಆಂತರಿಕ ಸಚಿವ ಸಫ್ರ್ರಾಝ್ ಬುಗ್ತಿ ಪ್ರತಿಕ್ರಿಯಿಸಿದ್ದಾರೆ.





