America | ಮಿಯಾಮಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ಢಿಕ್ಕಿ: ಇಬ್ಬರಿಗೆ ಗಾಯ

Photo: TOI
ಮಿಯಾಮಿ: ಅಮೆರಿಕದ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಎರಡು ವಿಮಾನಗಳು ಪರಸ್ಪರ ಢಿಕ್ಕಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಕೋಪಾ ಏರ್ಲೈನ್ಸ್ ವಿಮಾನ ಮತ್ತು ಯುಪಿಎಸ್ ನ ಸರಕು ಸಾಗಣೆ ವಿಮಾನ ಟ್ಯಾಕ್ಸಿವೇಯಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕೋಪಾ ಏರ್ಲೈನ್ಸ್ ನ ಬೋಯಿಂಗ್ 737 ವಿಮಾನದ ರೆಕ್ಕೆಯ ತುದಿಯು ಸ್ಥಳೀಯ ಸಮಯ ರಾತ್ರಿ 9 ಗಂಟೆ ಸುಮಾರಿಗೆ ಯುಪಿಎಸ್ ನ ಬೋಯಿಂಗ್ 767 ವಿಮಾನದ ಮುಂಭಾಗಕ್ಕೆ ಅಪ್ಪಳಿಸಿದೆ. ಘಟನೆಯ ಕುರಿತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತನಿಖೆ ನಡೆಸುತ್ತಿದೆ ಎಂದು 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಢಿಕ್ಕಿಯಲ್ಲಿ ಗಾಯಗೊಂಡ ಇಬ್ಬರಿಗೆ ವಿಮಾನ ನಿಲ್ದಾಣದಲ್ಲೇ ಚಿಕಿತ್ಸೆ ನೀಡಲಾಗಿದೆ. ಎರಡೂ ವಿಮಾನಗಳನ್ನು ಬೇರೆ ಟ್ಯಾಕ್ಸಿವೇ ಗಳಿಗೆ ಸ್ಥಳಾಂತರಿಸಿದ ಬಳಿಕ ವಿಮಾನ ನಿಲ್ದಾಣದ ಕಾರ್ಯಾಚರಣೆ ಎಂದಿನಂತೆ ಮುಂದುವರಿದಿದೆ ಎಂದು ಮಿಯಾಮಿ-ಡೇಡ್ ವಿಮಾನಯಾನ ಇಲಾಖೆಯ ವಕ್ತಾರ ಗ್ರೆಗ್ ಚಿನ್ ತಿಳಿಸಿದ್ದಾರೆ.
ಪನಾಮ ನಗರದಿಂದ ಆಗಮಿಸಿದ್ದ ಕೋಪಾ ವಿಮಾನವು ತನ್ನ ನಿಗದಿತ ಗೇಟ್ ನತ್ತ ಸಾಗುತ್ತಿತ್ತು. ಕೊಲಂಬಿಯಾದ ಬೊಗೋಟಾಗೆ ತೆರಳಬೇಕಿದ್ದ ಯುಪಿಎಸ್ ವಿಮಾನವು ರನ್ ವೇ ಕಡೆಗೆ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಎರಡು ಟ್ಯಾಕ್ಸಿವೇ ಗಳು ಸೇರುವ ಸ್ಥಳದಲ್ಲಿ ವಿಮಾನಗಳು ಢಿಕ್ಕಿಯಾಗಿವೆ.
ಯುಪಿಎಸ್ ವಿಮಾನದ ಸಿಬ್ಬಂದಿಗೆ ಕೋಪಾ ವಿಮಾನಕ್ಕೆ ದಾರಿ ಮಾಡಿಕೊಡುವಂತೆ ವಾಯು ಸಂಚಾರ ನಿಯಂತ್ರಕರು ಸೂಚಿಸಿದ್ದರು ಎಂದು ವರದಿ ತಿಳಿಸಿದೆ.







