ಅಮೆರಿಕ: ಶ್ವೇತಭವನ ಬಳಿ ದಾಳಿಗೊಳಗಾದ ಒಬ್ಬ ಯೋಧೆ ಮೃತ್ಯು

PC: x.com/16NewsNow
ವಾಷಿಂಗ್ಟನ್: ಶ್ವೇತಭವನದ ಬಳಿ ಬುಧವಾರ ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಪಶ್ಚಿಮ ವರ್ಜೀನಿಯಾ ನ್ಯಾಷನಲ್ ಗಾರ್ಡ್ ಗೆ ಸೇರಿದ್ದ ಇಬ್ಬರು ಸೈನಿಕರ ಪೈಕಿ ಸಾರಾ ಬೆಕ್ಸ್ಟ್ರೋಮ್ ಕೊನೆಯುಸಿರೆಳೆದಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ.
"ಗೌರವಾನ್ವಿತ, ಯುವ, ಅದ್ಭುತ ಮಹಿಳೆ ಎನಿಸಿದ ವೆಸ್ಟ್ ವರ್ಜೀನಿಯಾದ ಗಾಡ್ರ್ಸ್ಮನ್ ಸರಹ್ ಬೆಕ್ಸ್ಟ್ರೋಮ್ ಅಸು ನೀಗಿದ್ದಾರೆ. ಆಕೆ ಇನ್ನು ನಮ್ಮೊಂದಿಗೆ ಇಲ್ಲ" ಎಂದು ಟ್ರಂಪ್ ಹೇಳಿದ್ದಾರೆ. ಮತ್ತೊಬ್ಬ ಗಾಯಾಳುವಿನ ಸ್ಥಿತಿ ಕೂಡಾ ಚಿಂತಾಜನಕವಾಗಿದ್ದು, ಜೀವನ್ಮರಣ ಹೋರಾಟ ಮುಂದುವರಿಸಿದ್ದಾರೆ ಎಂದು ಟ್ರಂಪ್ ವಿವರಿಸಿದ್ದಾರೆ. ಆತನಿಗೆ ಸಂಬಂಧಿಸಿದಂತೆ ನಾವು ಒಳ್ಳೆಯ ಸುದ್ದಿಯನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಾರಾ ಅವರ ಸಾವನನ್ನು ವೆಸ್ಟ್ ವರ್ಜೀನಿಯಾ ಗವರ್ನರ್ ಪ್ಯಾಟ್ರಿಕ್ ಮೊರಿಸಿ ಕೂಡಾ ಎಕ್ಸ್ ಪೋಸ್ಟ್ನಲ್ಲಿ ದೃಢಪಡಿಸಿದ್ದಾರೆ. "ಕೆಲ ಕ್ಷಣಗಳ ಮೊದಲು, ನಿನ್ನೆಯ ಭಯಾನಕ ದಾಳಿಯಲ್ಲಿ ಗಾಯಗೊಂಡಿದ್ದ ತಜ್ಞೆ ಸಾರಾ ಬೆಕ್ಸ್ಟ್ರೋಮ್ ಮೃತಪಟ್ಟಿದ್ದಾರೆ. ನಮ್ಮ ನಿರೀಕ್ಷೆಯಂತೆ ಚಿಕಿತ್ಸೆಯ ಫಲಿತಾಂಶ ಬಂದಿಲ್ಲ. ಬದಲಾಗಿ ನಾವು ಭೀತಿಪಡುತ್ತಿದ್ದ ಫಲಿತಾಂಶ ಬಂದಿದೆ" ಎಂದಿದ್ದಾರೆ.





