ಫೆಲೆಸ್ತೀನ್ ನಾಗರಿಕರ ಮೇಲೆ ದಾಳಿಗೆ ಹಮಾಸ್ ಯೋಜನೆ : ಅಮೆರಿಕ ಆರೋಪ

Reuters
ವಾಷಿಂಗ್ಟನ್, ಅ.19: ಫೆಲೆಸ್ತೀನ್ ಸಶಸ್ತ್ರ ಗುಂಪು ಹಮಾಸ್ ಗಾಝಾದಲ್ಲಿ ಫೆಲೆಸ್ತೀನ್ ನಾಗರಿಕರ ಮೇಲೆ `ಸನ್ನಿಹಿತ' ದಾಳಿಯನ್ನು ಯೋಚಿಸುತ್ತಿದೆ ಎಂಬ ವಿಶ್ವಾಸಾರ್ಹ ವರದಿ ಲಭಿಸಿದೆ ಎಂದು ಅಮೆರಿಕಾದ ವಿದೇಶಾಂಗ ಇಲಾಖೆ ಶನಿವಾರ ಹೇಳಿದೆ.
`ಫೆಲೆಸ್ತೀನ್ ನಾಗರಿಕರ ವಿರುದ್ಧದ ಈ ಯೋಜಿತ ಆಕ್ರಮಣವು ಕದನ ವಿರಾಮ ಒಪ್ಪಂದದ ಗಂಭೀರ ಮತ್ತು ನೇರ ಉಲ್ಲಂಘನೆಯಾಗುತ್ತದೆ. ಮತ್ತು ಮಧ್ಯಸ್ಥಿಕೆ ಪ್ರಯತ್ನಗಳ ಮೂಲಕ ಸಾಧಿಸಲಾದ ಗಮನಾರ್ಹ ಪ್ರಗತಿಯನ್ನು ದುರ್ಬಲಗೊಳಿಸುತ್ತದೆ' ಎಂದು ವಿದೇಶಾಂಗ ಇಲಾಖೆ ವೆಬ್ಸೈಟ್ನಲ್ಲಿ ಹೇಳಿಕೆ ಬಿಡುಗಡೆಗೊಳಿಸಿದೆ. ಈ ದಾಳಿಯೊಂದಿಗೆ ಹಮಾಸ್ ಮುಂದುವರಿದರೆ ಗಾಝಾದ ಜನರನ್ನು ರಕ್ಷಿಸಲು ಮತ್ತು ಕದನ ವಿರಾಮದ ಸಮಗ್ರತೆಯನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸುವ, ಶಾಂತಿಯನ್ನು ಉಳಿಸಿಕೊಳ್ಳುವ ಮತ್ತು ಗಾಝಾ ಹಾಗೂ ಈ ಸಂಪೂರ್ಣ ವಲಯಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ಮುಂದುವರಿಸುವ ತಮ್ಮ ಬದ್ಧತೆಯನ್ನು ಖಾತರಿಪಡಿಸಲು ಅಮೆರಿಕಾ ಹಾಗೂ ಇತರ ಮಧ್ಯಸ್ಥಿಕೆದಾರರು ದೃಢ ಸಂಕಲ್ಪ ಮಾಡಿದ್ದಾರೆ' ಎಂದು ಎಚ್ಚರಿಕೆಯನ್ನೂ ನೀಡಿದೆ.
ಕಣ್ಣಿಗೆ ಬಟ್ಟೆ ಕಟ್ಟಲಾದ 8 ಮಂದಿ ಶಂಕಿತರನ್ನು ರಸ್ತೆಯಲ್ಲಿ ಗುಂಡಿಟ್ಟು ಹತ್ಯೆ ಮಾಡುವ ವೀಡಿಯೊವನ್ನು ಹಮಾಸ್ ಬಿಡುಗಡೆಗೊಳಿಸಿದ ಬಳಿಕ ಅಮೆರಿಕ ಈ ಎಚ್ಚರಿಕೆ ರವಾನಿಸಿದೆ. `ಶತ್ರುಗಳೊಂದಿಗೆ ಕೈ ಜೋಡಿಸಿರುವ ದ್ರೋಹಿಗಳಿಗೆ ಇದೇ ಶಿಕ್ಷೆ' ಎಂದು ಹಮಾಸ್ ಹೇಳಿರುವುದಾಗಿ ವರದಿಯಾಗಿದೆ.





