ಯು ವೀಸಾ ಎಂದರೇನು? ʼನಕಲಿ ದರೋಡೆʼ ಮೂಲಕ ವೀಸಾ ವಂಚನೆ ಮಾಡುತ್ತಿದ್ದ ಭಾರತೀಯ ಮೂಲದ ರಾಮ್ ಪಟೇಲ್ !

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಅಮೆರಿಕದಲ್ಲಿ ವಾಸ್ತವ್ಯದ ವೇಳೆ ಮಾನಸಿಕ ಅಥವಾ ದೈಹಿಕ ಕಿರುಕುಳವನ್ನು ಅನುಭವಿಸಿದ ಅಥವಾ ಅಪರಾಧ ಚಟುವಟಿಕೆಯ ತನಿಖೆ ಅಥವಾ ವಿಚಾರಣೆಯಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಸಹಕರಿಸಲು ಸಿದ್ಧರಿರುವ ಕೆಲ ಅಪರಾಧಗಳ ಬಲಿಪಶುಗಳು ಯು ವೀಸಾ ಪಡೆಯಲು ಅರ್ಹರಾಗಿರುತ್ತಾರೆ.
ಅಮೆರಿಕ ಇತ್ತೀಚೆಗೆ ವೀಸಾ ನಿಯಮವನ್ನು ಬಿಗಿಗೊಳಿಸುತ್ತಿದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಯಾಣ ಏಜೆನ್ಸಿಗಳ ಮಾಲಕರು, ಕಾರ್ಯನಿರ್ವಾಹಕರು ಮತ್ತು ಹಿರಿಯ ಅಧಿಕಾರಿಗಳ ಮೇಲೆ ವೀಸಾ ನಿರ್ಬಂಧಗಳನ್ನು ವಿಧಿಸುತ್ತಿದೆ.
ಭಾರತೀಯ ಮೂಲದ ರಾಮ್ ಪಟೇಲ್(37) ಇತ್ತೀಚೆಗೆ ಬೋಸ್ಟನ್ನ ಫೆಡರಲ್ ನ್ಯಾಯಾಲಯದಲ್ಲಿ ವೀಸಾ ವಂಚನೆ ಪಿತೂರಿಯ ಭಾಗವಾಗಿ ಸಶಸ್ತ್ರ ದರೋಡೆಗೆ ಪಿತೂರಿ ನಡೆಸಿದ್ದಕ್ಕಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಪಟೇಲ್ ಮತ್ತು ಸಹ ಆರೋಪಿ ಬಲ್ವಂತ್ ಸಿಂಗ್ಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ, ಮೂರು ವರ್ಷಗಳವರೆಗೆ ಮೇಲ್ವಿಚಾರಣೆ ಮತ್ತು 2,50,000 ದಂಡ ಮತ್ತು ಶಿಕ್ಷೆ ಪೂರ್ಣಗೊಂಡ ನಂತರ ಗಡೀಪಾರು ಶಿಕ್ಷೆಯನ್ನು ವಿಧಿಸಲಾಗುತ್ತದೆ.
2023ರ ಮಾರ್ಚ್ನಲ್ಲಿ ಮ್ಯಾಸಚೂಸೆಟ್ಸ್ನಲ್ಲಿರುವ ಜಿಲ್ಲಾ ವಕೀಲರ (ಡಿಎ) ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪಟೇಲ್ ಮತ್ತು ಆತನ ಸಹಚರ ಬಲ್ವಿಂದರ್ ಸಿಂಗ್(39) ಮ್ಯಾಸಚೂಟ್ಸ್ನಲ್ಲಿ ಕನಿಷ್ಠ ಐದು ಸೇರಿದಂತೆ ಅಮೆರಿಕದಾದ್ಯಂತ ಕನಿಷ್ಠ 9 ಮದ್ಯದ ಅಂಗಡಿಗಳು, ಫಾಸ್ಟ್-ಫುಡ್ ರೆಸ್ಟೋರೆಂಟ್ಗಳಲ್ಲಿ ಸಶಸ್ತ್ರ ದರೋಡೆಗೆ ಪಿತೂರಿ ನಡೆಸಿದ್ದ.
ಅಂಗಡಿಯ ಗುಮಾಸ್ತರು ಅಥವಾ ಮಾಲಕರನ್ನು ಯು ವೀಸಾ ಅರ್ಜಿಯಲ್ಲಿ ಹಿಂಸಾತ್ಮಕ ಅಪರಾಧದ ಬಲಿಪಶುಗಳು ಎಂದು ಹೇಳಿಕೊಳ್ಳುವುದು ಈ ದರೋಡೆಯ ಉದ್ದೇಶವಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಾನಸಿಕ ಅಥವಾ ದೈಹಿಕ ಕಿರುಕುಳಕ್ಕೆ ಒಳಗಾದವರಿಗೆ ಮತ್ತು ಅಪರಾಧ ಚಟುವಟಿಕೆಯ ತನಿಖೆ ಅಥವಾ ವಿಚಾರಣೆಯಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಸಹಾಯಕವಾಗಿರುವ ಕೆಲವು ಅಪರಾಧಗಳ ಬಲಿಪಶುಗಳಿಗೆ ಯು ವೀಸಾ ನೀಡಲಾಗುತ್ತದೆ.
ಜಿಲ್ಲಾ ವಕೀಲರ (ಡಿಎ) ಕಚೇರಿ ನೀಡಿದ ಹೇಳಿಕೆಯ ಪ್ರಕಾರ, ದರೋಡೆ ವೇಳೆ ದರೋಡೆಕೋರ ಅಂಗಡಿ ಗುಮಾಸ್ತರು ಅಥವಾ ಮಾಲಕರಿಗೆ ಬಂದೂಕಿನಿಂದ ಬೆದರಿಕೆ ಹಾಕಿ ಹಣವನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃತ್ಯವನ್ನು ಎಸಗಿ ಆರೋಪಿ ʼಪರಾರಿಯಾದʼ ಬಳಿಕವೇ ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು. ಬಲಿಪಶುಗಳು ಈ ಪಿತೂರಿಯಲ್ಲಿ ಭಾಗವಹಿಸಲು ಪಟೇಲ್ಗೆ ಹಣ ನೀಡಿದ್ದರು. ಓರ್ವ ಬಲಿಪಶು 20,000 ಡಾಲರ್ ಪಾವತಿಸಿದ್ದ ಎಂದು ಡಿಎ ಕಚೇರಿ ತಿಳಿಸಿದೆ.
ಯು ವೀಸಾ ಅಮೆರಿಕದಲ್ಲಿ ವಲಸೆ ರಹಿತ ವೀಸಾ ಆಗಿದೆ. ಮಾನಸಿಕ ಅಥವಾ ದೈಹಿಕ ಕಿರುಕುಳವನ್ನು ಅನುಭವಿಸಿದ ಮತ್ತು ಅಪರಾಧ ಚಟುವಟಿಕೆಯ ತನಿಖೆ ಅಥವಾ ವಿಚಾರಣೆಯಲ್ಲಿ ಕಾನೂನು ಜಾರಿ ಸಂಸ್ಥೆಗಳು ಮತ್ತು ಸರಕಾರಿ ಅಧಿಕಾರಿಗಳಿಗೆ ಸಹಾಯ ಮಾಡಲು ಸಿದ್ಧರಿರುವ ಕೆಲವು ಅಪರಾಧಗಳ ಬಲಿಪಶುಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.







