ಇರಾನಿನ ತೈಲದ ಮೇಲಿನ ನಿರ್ಬಂಧ ತಾತ್ಕಾಲಿಕ ಅಮಾನತು: ಅಮೆರಿಕ ಘೋಷಣೆ

ಸಾಂದರ್ಭಿಕ ಚಿತ್ರ | Photo Credit : magnific.com
ವಾಶಿಂಗ್ಟನ್, ಜೂ.22: ಇರಾನ್ ಗೆ ಕಚ್ಚಾ ತೈಲ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಉತ್ಪಾದಿಸಲು, ಮಾರಾಟ ಮಾಡಲು ಹಾಗೂ ವಿತರಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಅದರ ಮೇಲಿನ ನಿರ್ಬಂಧಗಳನ್ನು ಆಗಸ್ಟ್ 21ರವರೆಗೆ ತಾತ್ಕಾಲಿಕವಾಗಿ ಅಮಾನತುಗೊಳಿಸಿರುವುದಾಗಿ ಅಮೆರಿಕದ ಖಜಾನೆ ಇಲಾಖೆ ಸೋಮವಾರ ತಿಳಿಸಿದೆ.
‘ಇರಾನ್ ಮೂಲದ ಕಚ್ಚಾ ತೈಲದ ಉತ್ಪಾದನೆ, ಮಾರಾಟ ಮತ್ತು ಸಾಗಣೆಗೆ ಸಂಬಂಧಿಸಿದಂತೆ ಈ ಹಿಂದೆ ನಿಷೇಧಿಸಲಾಗಿದ್ದ ಎಲ್ಲಾ ವಹಿವಾಟುಗಳಿಗೆ 2026ರ ಆಗಸ್ಟ್ 21ರವರೆಗೆ ಅನುಮತಿ ನೀಡಲಾಗಿದೆ’ ಎಂದು ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು ನಿರ್ವಹಿಸುವ ಖಜಾನೆ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಬದ್ಧರಾಗಿರುವುದು ಹಾಗೂ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)ಯ ಪರಿವೀಕ್ಷಕರು ತಮ್ಮ ದೇಶವನ್ನು ಪ್ರವೇಶಿಸಲು ಅವಕಾಶ ನೀಡಲು ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳಲ್ಲಿ ಇರಾನ್ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
ಸ್ವಿಟ್ಸರ್ಲ್ಯಾಂಡ್ನಲ್ಲಿ ಇರಾನಿನ ಅಧಿಕಾರಿಗಳೊಂದಿಗೆ ನಡೆಸಿದ ದೀರ್ಘಾವಧಿಯ ಮಾತುಕತೆ ಅಂತಿಮ ಒಪ್ಪಂದ ಯಶಸ್ವಿಯಾಗಲು ಉತ್ತಮ ಅಡಿಪಾಯವನ್ನು ಸೃಷ್ಟಿಸಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಗ್ಗಿಸುವ ನಿಟ್ಟಿನಲ್ಲಿ ಮಹತ್ವದ ಹಂತ ತಲುಪಿವೆ ಎಂದು ರಾಜತಾಂತ್ರಿಕ ವಲಯಗಳು ಅಭಿಪ್ರಾಯಪಟ್ಟಿವೆ.






