ವೆನೆಝುವೆಲ ಮೇಲೆ ಅಮೆರಿಕ ದಾಳಿ, ಮಡುರೊ ಸೆರೆ: ಇರಾನ್, ರಶ್ಯ ಸೇರಿ ವಿವಿಧ ದೇಶಗಳಿಂದ ಖಂಡನೆ

ಡೊನಾಲ್ಡ್ ಟ್ರಂಪ್ , ನಿಕೊಲಸ್ ಮಡುರೊ | Photo Credit : NDTV
ಕ್ಯಾರಕಸ್, ಜ. 3: ಅಮೆರಿಕ ವೆನೆಝುವೆಲ ವಿರುದ್ಧ ‘‘ಬೃಹತ್ ಪ್ರಮಾಣದಲ್ಲಿ ದಾಳಿ ನಡೆಸಿದೆ’’ ಹಾಗೂ ಆ ದೇಶದ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿದ್ದಾರೆ.
ಇದರ ಬೆನ್ನಿಗೇ, ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿಕೆಯೊಂದನ್ನು ನೀಡಿದ ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೊ, ‘‘ಈಗ ವೆನೆಝುವೆಲ ಹೊಸ ಮುಂಜಾನೆಯೊಂದನ್ನು ನೋಡುತ್ತಿದೆ’’ ಎಂದು ಬಣ್ಣಿಸಿದ್ದಾರೆ. ‘‘ನಿರಂಕುಶಾಧಿಕಾರಿ ಹೋಗಿದ್ದಾನೆ. ಅವರು ಇನ್ನು ಅಂತಿಮವಾಗಿ ತನ್ನ ಅಪರಾಧಗಳಿಗಾಗಿ ಶಿಕ್ಷೆಯನ್ನು ಅನುಭವಿಸುತ್ತಾರೆ’’ ಎಂದು ಲ್ಯಾಂಡೊ ಹೇಳಿದ್ದಾರೆ.
ಈ ಬೆಳವಣಿಗೆಗೆ ಇತರ ದೇಶಗಳು ಕೂಡ ಪ್ರತಿಕ್ರಿಯಿಸಿವೆ. ಅದರ ವಿವರ ಇಲ್ಲಿದೆ.
ಕೊಲಂಬಿಯ
ಅಮೆರಿಕವು ವೆನೆಝುವೆಲದ ಮೇಲೆ ನಡೆಸಿರುವ ದಾಳಿಯು ಇಡೀ ಜಗತ್ತಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಕೊಲಂಬಿಯದ ಅಧ್ಯಕ್ಷ ಗುಸ್ತಾವೊ ಪೆಟ್ರೊ ಎಕ್ಸ್ನಲ್ಲಿ ಬರೆದಿದ್ದಾರೆ. ‘‘ಯಾವುದೇ ರೀತಿಯ ಸಶಸ್ತ್ರ ಸಂಘರ್ಷದ ಬದಲು ಶಾಂತಿ, ಅಂತರ್ರಾಷ್ಟ್ರೀಯ ಕಾನೂನಿಗೆ ಗೌರವ ಹಾಗೂ ಪ್ರಾಣ ಮತ್ತು ಮಾನವ ಘನತೆಯ ರಕ್ಷಣೆ ಮುಖ್ಯವಾಗಬೇಕು ಎನ್ನುವುದು ರಿಪಬ್ಲಿಕ್ ಆಫ್ ಕಾಂಗೊದ ನಂಬಿಕೆಯಾಗಿದೆ’’ ಎಂದು ಅವರು ಹೇಳಿದ್ದಾರೆ.
‘‘ವೆನೆಝುವೆಲ ಮತ್ತು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ವಿರುದ್ಧದ ಆಕ್ರಮಣವನ್ನು ಕೊಲಂಬಿಯ ತಿರಸ್ಕರಿಸುತ್ತದೆ’’ ಎಂಬುದಾಗಿ ಇನ್ನೊಂದು ಸಂದೇಶದಲ್ಲಿ ಅವರು ಬರೆದಿದ್ದಾರೆ.
ಕ್ಯೂಬಾ
ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಿಯಾಝ್-ಕನೇಲ್ ಅಮೆರಿಕದ ಕಾರ್ಯಾಚರಣೆಯನ್ನು ಕಟುವಾಗಿ ಖಂಡಿಸಿ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ. ಅಮೆರಿಕವು ವೆನೆಝುವೆಲದ ವಿರುದ್ಧ ‘‘ಪಾತಕ ದಾಳಿ’’ ನಡೆಸಿದೆ ಎಂದು ಆರೋಪಿಸಿರುವ ಅವರು, ಇದಕ್ಕೆ ತುರ್ತು ಅಂತರ್ರಾಷ್ಟ್ರೀಯ ಪ್ರತಿಕ್ರಿಯೆ ಬೇಕು ಎಂಬುದಾಗಿ ಹೇಳಿದ್ದಾರೆ.
‘‘ಕ್ಯೂಬಾದ ‘ಶಾಂತಿ ವಲಯ’ದ ಮೇಲೆ ಭೀಕರ ದಾಳಿ ನಡೆಸಲಾಗಿದೆ. ಅಮೆರಿಕದ ಈ ಕೃತ್ಯವು ಭಯೋತ್ಪಾದನೆಯಾಗಿದೆ. ಇದು ವೆನೆಝುವೆಲದ ಜನರ ಮೇಲೆ ಮಾತ್ರ ಮಾಡಿದ ದಾಳಿಯಲ್ಲ, ಇಡೀ ‘ನಮ್ಮ ಅಮೆರಿಕ’ದ ಮೇಲೆ ಮಾಡಿದ ಆಕ್ರಮಣವಾಗಿದೆ’’ ಎಂಬುದಾಗಿ ಡಿಯಾಝ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘‘ನಮ್ಮ ದೇಶ ಅಥವಾ ಸಾವು, ಇದನ್ನು ನಾವು ಎದುರಿಸಬೇಕು’’ ಎಂಬ ಕ್ರಾಂತಿಕಾರಿ ಘೋಷಣೆಯೊಂದಿಗೆ ಅವರು ತನ್ನ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.
ಚಿಲಿ
ವೆನೆಝುವೆಲದಲ್ಲಿ ಅಮೆರಿಕ ನಡೆಸಿರುವ ಸೇನಾ ಕಾರ್ಯಾಚರಣೆಯನ್ನು ಚಿಲಿ ಅಧ್ಯಕ್ಷ ಗ್ಯಾಬ್ರಿಯೆಲ್ ಬೊರಿಕ್ ಫೋಂಟ್ ಖಂಡಿಸಿದ್ದಾರೆ.
‘‘ಬಲಪ್ರಯೋಗ ನಿಷೇಧ, ಹಸ್ತಕ್ಷೇಪ ನಡೆಸದಿರುವುದು, ಅಂತರ್ರಾಷ್ಟ್ರೀಯ ವಿವಾದಗಳ ಶಾಂತಿಯುತ ಪರಿಹಾರ ಮತ್ತು ದೇಶಗಳ ಭೂಭಾಗ ಸಮಗ್ರತೆಗೆ ಸಂಬಂಧಿಸಿದ ಅಂತರ್ರಾಷ್ಟ್ರೀಯ ಕಾನೂನಿನ ಮೂಲ ತತ್ವಗಳಿಗೆ ಚಿಲಿ ಬದ್ಧವಾಗಿದೆ. ವೆನೆಝುವೆಲ ಬಿಕ್ಕಟ್ಟನ್ನು ಮಾತುಕತೆ ಮತ್ತು ಬಹುಪಕ್ಷೀಯ ವೇದಿಕೆಯಲ್ಲಿ ಪರಿಹರಿಸಿಕೊಳ್ಳಬೇಕೇ ಹೊರತು ಹಿಂಸೆ ಅಥವಾ ವಿದೇಶಿ ಹಸ್ತಕ್ಷೇಪದ ಮೂಲಕ ಅಲ್ಲ’’ ಎಂಬುದಾಗಿ ಚಿಲಿ ಅಧ್ಯಕ್ಷರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಇರಾನ್
ಅಮೆರಿಕವು ವೆನೆಝುವೆಲದ ಮೇಲೆ ನಡೆಸಿರುವ ಸೇನಾ ಆಕ್ರಮಣವನ್ನು ಖಂಡಿಸಿರುವ ಇರಾನ್ನ ಸರ್ವೋಚ್ಛ ನಾಯಕ ಆಯುತುಲ್ಲಾ ಅಲಿ ಖಾಮಿನೈ, ‘‘ಒಂದು ಸರಕಾರದ ಮೇಲೆ ಅಥವಾ ಒಂದು ದೇಶದ ಮೇಲೆ ಶತ್ರುವೊಂದು ಸುಳ್ಳು ಹೇಳಿಕೆಗಳ ಮೂಲಕ ಏನನ್ನೋ ಹೇರಲು ನಿರ್ಧರಿಸಿದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಾಗ, ಅವರು ಆ ಶತ್ರುವಿನ ವಿರುದ್ಧ ದೃಢವಾಗಿ ನಿಲ್ಲಬೇಕು’’ ಎಂಬುದಾಗಿ ಎಕ್ಸ್ನಲ್ಲಿ ಬರೆದಿದ್ದಾರೆ.
‘‘ನಾವು ಅವರಿಗೆ ತಲೆಬಾಗುವುದಿಲ್ಲ ದೇವರನ್ನು ಆಶ್ರಯಿಸುತ್ತಾ ಮತ್ತು ಜನರ ಬೆಂಬಲದ ಮೇಲೆ ವಿಶ್ವಾಸವಿಡುತ್ತಾ, ನಾವು ಶತ್ರು ಮಂಡಿಯೂರುವಂತೆ ಮಾಡುತ್ತೇವೆ’’ ಎಂದು ಅವರು ಹೇಳಿದ್ದಾರೆ.
ರಶ್ಯ
ವೆನೆಝುವೆಲದ ವಿರುದ್ಧ ಅಮೆರಿಕ ನಡೆಸಿರುವ ಸೇನಾ ಕಾರ್ಯಾಚರಣೆಯಿಂದ ರಶ್ಯ ತೀವ್ರವಾಗಿ ಕಳವಳಗೊಂಡಿದೆ ಮತ್ತು ಅದನ್ನು ಖಂಡಿಸುತ್ತದೆ ಎಂದು ರಶ್ಯದ ವಿದೇಶ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ಪ್ರಸಕ್ತ ಪರಿಸ್ಥಿತಿಯಲ್ಲಿ, ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಡೆಯುವುದು ಮತ್ತು ಮತುಕತೆಯ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವುದು ಅಗತ್ಯವಾಗಿದೆ’’ ಎಂದು ಅದು ಹೇಳಿದೆ.
ಮೆಕ್ಸಿಕೊ ಮತ್ತು ಬ್ರೆಝಿಲ್ ದೇಶಗಳೂ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಖಂಡಿಸಿವೆ.







