ಮಾದಕ ವಸ್ತು ಕಳ್ಳಸಾಗಾಣಿಕೆ ದೋಣಿಗಳ ಮೇಲೆ ಅಮೆರಿಕ ದಾಳಿ; 11 ಮಂದಿ ಮೃತ್ಯು

ವಾಷಿಂಗ್ಟನ್: ಮಾದಕವಸ್ತುಗಳ ಕಳ್ಳಸಾಗಾಣಿಕೆ ಮಾಡುತ್ತಿವೆ ಎನ್ನಲಾದ ಮೂರು ಹಡಗುಗಳ ಮೇಲೆ ಪೂರ್ವ ಫೆಸಿಫಿಕ್ ಮತ್ತು ಕೆರಿಬಿಯನ್ ಸಮುದ್ರದಲ್ಲಿ ಸೋಮವಾರ ರಾತ್ರಿ ಅಮೆರಿಕದ ಸೇನೆ ನಡೆಸಿದ ದಿಢೀರ್ ದಾಳಿಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಸದರ್ನ್ ಕಮಾಂಡ್ ಪ್ರಕಟಿಸಿದೆ.
"ಈ ಮಾರ್ಗವಾಗಿ ಮಾದಕವಸ್ತುಗಳ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂದು ಗುಪ್ತಚರ ವಿಭಾಗ ಖಚಿತಪಡಿಸಿತ್ತು. ತಕ್ಷಣ ನಾವು ಮಾದಕವಸ್ತು ವಿರೋಧಿ ಕಾರ್ಯಾಚರಣೆ ಆರಂಭಿಸಿದೆವು" ಎಂದು ಅಧಿಕೃತ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಪೂರ್ವ ಫೆಸಿಫಿಕ್ ನಲ್ಲಿ ನಡೆದ ದಾಳಿಯಲ್ಲಿ ಮೊದಲ ಹಡಗಿನಲ್ಲಿದ್ದ ನಾಲ್ವರು, ಎರಡನೇ ಹಡಗಿನಲ್ಲಿದ್ದ ನಾಲ್ವರು ಹಾಗೂ ಕೆರಿಬಿಯನ್ ಸಮುದ್ರದಲ್ಲಿ ನಡೆದ ದಾಳಿಯಲ್ಲಿ ಮತ್ತೊಂದು ಹಡಗಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಅಮೆರಿಕದ ಸೇನೆಗೆ ಯಾವುದೇ ಹಾನಿಯಾಗಿಲ್ಲ" ಎಂದು ಸ್ಪಷ್ಟಪಡಿಸಲಾಗಿದೆ.
ಅಮೆರಿಕದ ಕಟ್ಟುನಿಟ್ಟಿನ ಮಾದಕ ವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ ಕಳೆದ ಸೆಪ್ಟೆಂಬರ್‌ನಿಂದೀಚೆಗೆ ಕನಿಷ್ಠ 135 ಮಂದಿ ಹತರಾಗಿದ್ದಾರೆ.






