ಟ್ರಂಪ್ ಒಪ್ಪಂದದ ಸುಳಿವು ನೀಡಿದ ಬೆನ್ನಲ್ಲೇ ಇರಾನ್ ದ್ವೀಪದ ಮೇಲೆ ಅಮೆರಿಕದಿಂದ ದಾಳಿ!

Photo: x.com/AlArabiya_Eng
ವಾಷಿಂಗ್ಟನ್: ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿರುವ ಬೆನ್ನಲ್ಲೇ, ಇರಾನ್ ನ ಕೆಶ್ಮ್ ದ್ವೀಪದ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇರಾನ್ ಜೊತೆ ರಾಜತಾಂತ್ರಿಕ ಒಪ್ಪಂದದ ಸಾಧ್ಯತೆ ಕುರಿತು ಟ್ರಂಪ್ ಮಾತನಾಡುತ್ತಿರುವ ಸಂದರ್ಭದಲ್ಲೇ ಈ ದಾಳಿ ಗಮನ ಸೆಳೆದಿದೆ. ಇತ್ತೀಚಿನ ವಾರಗಳಲ್ಲಿ ಇರಾನ್ ವಿರುದ್ಧ ಅಮೆರಿಕ ಸೀಮಿತ ಪ್ರಮಾಣದ ಮಿಲಿಟರಿ ದಾಳಿಗಳನ್ನು ನಡೆಸಿದೆ ಎನ್ನಲಾಗಿದ್ದು, ಮತ್ತೆ ವ್ಯಾಪಕ ಮಿಲಿಟರಿ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ.
ಹಾರ್ಮುಝ್ ಜಲಸಂಧಿಯಲ್ಲಿರುವ ಕೆಶ್ಮ್ ದ್ವೀಪದಲ್ಲಿ ಹಲವು ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ನ ಸರ್ಕಾರಿ ಸುದ್ದಿಸಂಸ್ಥೆ IRNA ವರದಿ ಮಾಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಮೆರಿಕದ ದಾಳಿಯ ಕುರಿತು ವರದಿಯಾಗಿದೆ.
ಇತ್ತೀಚಿನ ದಾಳಿಗಳನ್ನು ಅಮೆರಿಕ ಉದ್ದೇಶಪೂರ್ವಕವಾಗಿಯೇ ಸೀಮಿತ ಪ್ರಮಾಣದಲ್ಲಿ ನಡೆಸುತ್ತಿದೆ. ಇರಾನ್ ವಿರುದ್ಧ ಮತ್ತೆ ಬೃಹತ್ ಮಿಲಿಟರಿ ಕಾರ್ಯಾಚರಣೆ ಆರಂಭಿಸುವುದನ್ನು ತಪ್ಪಿಸುವ ಉದ್ದೇಶದಿಂದ ದಾಳಿಗಳ ಮಾಹಿತಿಯನ್ನು ರಹಸ್ಯವಾಗಿಡಲಾಗುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ.
ಆದರೆ, ಕೆಶ್ಮ್ ದ್ವೀಪದ ಮೇಲಿನ ದಾಳಿಯ ಕುರಿತು ಅಮೆರಿಕ ಸರ್ಕಾರ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ದಾಳಿ ನಡೆಸುವ ಯೋಜನೆ ಇಲ್ಲ ಎಂದಿದ್ದ ಟ್ರಂಪ್
ಮಂಗಳವಾರ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಗಳ ಬಳಿಕ ಇರಾನ್ ಮೇಲೆ ದಾಳಿ ನಡೆಸುವ ಯೋಜನೆ ಇದೆಯೇ ಎಂದು ಸೋಮವಾರ ಟ್ರಂಪ್ ಅವರನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಅವರು 'ಇಲ್ಲ' ಎಂದು ಉತ್ತರಿಸಿದ್ದರು.
ಒಂದೆಡೆ ಇರಾನ್ ಜೊತೆ ಒಪ್ಪಂದದ ಸಾಧ್ಯತೆಯ ಬಗ್ಗೆ ಮಾತನಾಡುತ್ತಿರುವ ಟ್ರಂಪ್, ಮತ್ತೊಂದೆಡೆ ಇರಾನ್ ಮೇಲಿನ ಸೀಮಿತ ಮಿಲಿಟರಿ ದಾಳಿಗಳ ವರದಿಯ ಹಿನ್ನೆಲೆಯಲ್ಲಿ ಅಮೆರಿಕದ ಮುಂದಿನ ನಡೆ ಕುತೂಹಲ ಮೂಡಿಸಿದೆ.






