ಅಮೆರಿಕ ಬೆಂಬಲಿತ ಬ್ರೆಝಿಲ್ ಮಾಜಿ ಅಧ್ಯಕ್ಷನಿಗೆ 27 ವರ್ಷ ಜೈಲು

PC: x.com/BrianMteleSUR
ಬ್ರೆಸಿಲಿಯಾ: ಸೇನಾ ಅಧಿಕಾರಿಯಾಗಿ ಬ್ರೆಝಿಲ್ ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಆದೇಶವನ್ನು ಮೀರಿದ ಹಾಗೂ ದೇಶದ ಮುಖ್ಯಸ್ಥರಾಗಿ 2019 ರಿಂದ 2022ರ ವರೆಗೆ ಸಂಸ್ಥೆಗಳ ವಿಚಾರದಲ್ಲಿ ಮೂಗು ತೂರಿಸಿದ, ಎಡಪಂಥೀಯ ನಾಯಕ ಲೂಯಿಸ್ ಇನ್ಯಾಸಿಯೊ ಲುಲಾ ಡಿಸಿಲ್ವಾ ಅವರ ವಿರುದ್ಧ ಚುನಾವಣೆಯಲ್ಲಿ ಸೋತ ಬಳಿಕ ವಾಮಮಾರ್ಗದಲ್ಲಿ ಅಧಿಕಾರ ಕಸಿದುಕೊಳ್ಳಲು ಯತ್ನಿಸಿದ ಆರೋಪದಲ್ಲಿ ಬ್ರೆಝಿಲ್ ನ ಮಾಜಿ ಅಧ್ಯಕ್ಷ ಇದೀಗ 27 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಬೆಂಬಲ ಹೊಂದಿದ್ದ ಸೇನೆಯ ಮಾಜಿ ಕ್ಯಾಪ್ಟನ್, 2023ರಲ್ಲಿ ಲುಲಾ ಅಧಿಕಾರ ವಹಿಸಿಕೊಳ್ಳದಂತೆ ತಡೆಯಲು ಅಪರಾಧಿ ಸಂಘಟನೆಗಳ ಮೊರೆ ಹೋಗಿದ್ದರು ಎನ್ನಲಾದ ಪ್ರಕರಣದಲ್ಲಿ ಗುರುವಾರ ಶಿಕ್ಷೆಗೆ ಒಳಗಾಗಿದ್ದಾರೆ. ನೂತನ ಅಧ್ಯಕ್ಷ ಲುಲಾ, ಉಪಾಧ್ಯಕ್ಷ ಅಲ್ಕ್ ಮಿನ್ ಮತ್ತು ತಮ್ಮ ವಿರುದ್ಧ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ನ ಐದು ಮಂದಿ ನ್ಯಾಯಾಧೀಶರ ಪೈಕಿ ಒಬ್ಬರಾದ ಅಲೆಗ್ಸಾಂಡರ್ ಮೊರಾಸ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪ ಮಾಜಿ ಅಧ್ಯಕ್ಷರ ಮೇಲಿತ್ತು.
ತೀರ್ಪಿನ ಬಗ್ಗೆ ಹಲವು ದಿನಗಳ ಕಾಲ ಮತದಾನ ನಡೆದು ಅಂತಿಮವಾಗಿ ಐವರು ನ್ಯಾಯಮೂರ್ತಿಗಳ ತಂಡ 4-1 ಮತಗಳಿಂದ, ಬೊಲ್ಸೊನೊರೊಗೆ 27 ವರ್ಷ ಜೈಲು ಶಿಕ್ಷೆ ವಿಧಿಸುವ ತೀರ್ಪನ್ನು ಪ್ರಕಟಿಸಿದೆ.
1964-1985ರ ಅವಧಿಯ ನಿರಂಕುಶ ಪ್ರಭುತ್ವದ ವಿರುದ್ಧ ಧ್ವನಿ ಎತ್ತಿದ್ದ ಬೊಲ್ಸೊನಾರೊ (70), "ನಾನು ಅಮಾಯಕ; ರಾಜಕೀಯ ದಾಳಿಯ ಬಲಿಪಶು" ಎಂದು ಪ್ರತಿಕ್ರಿಯಿಸಿದ್ದಾರೆ.





