ಅಮೆರಿಕ-ಚೀನಾ ಸುಂಕ ಸಮರಕ್ಕೆ 90 ದಿನಗಳ ವಿರಾಮ
115 ಶೇ. ಕಡಿತಗೊಳಿಸಲು ಉಭಯ ದೇಶಗಳ ನಡುವೆ ಒಪ್ಪಂದ

ಸಾಂದರ್ಭಿಕ ಚಿತ್ರ | PC : freepik.com
ವಾಶಿಂಗ್ಟನ್: ಹೊಸದಾಗಿ ಹೇರಲಾಗಿರುವ ಸುಂಕಗಳನ್ನು 90 ದಿನಗಳವರೆತೆ ತಡೆಹಿಡಿಯಲು ಅಮೆರಿಕ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸಂಟ್ ಸೋಮವಾರ ತಿಳಿಸಿದ್ದಾರೆ. ಹಾಗಾಗಿ, ಉಭಯ ದೇಶಗಳ ಹಾಲಿ ಸುಂಕಗಳು 115 ಶೇಕಡದಷ್ಟು ಇಳಿಯಲಿದೆ.
ಎರಡು ದೇಶಗಳ ನಡುವಿನ ವ್ಯಾಪಾರ ಸಮರವನ್ನು ತಿಳಿಗೊಳಿಸುವುದಕ್ಕಾಗಿ ಮತ್ತು ಮುಂದಿನ ಮಾತುಕತೆಗಳಿಗೆ ಬಾಗಿಲು ತೆರೆಯುವುದಕ್ಕಾಗಿ ಹೆಚ್ಚುವರಿ ಸುಂಕಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಅಮೆರಿಕ ಮತ್ತು ಚೀನಾ ನಿರ್ಧರಿಸಿದವು ಎಂದು ಸ್ಕಾಟ್ ಬೆಸಂಟ್ ಹೇಳಿದರು.
‘‘ಹೆಚ್ಚುವರಿ ಸುಂಕದ ಜಾರಿಯನ್ನು 90 ದಿನಗಳವರೆಗೆ ತಡೆಹಿಡಿಯಲು ಮತ್ತು ಸುಂಕವನ್ನು ಗಣನೀಯವಾಗಿ ತಗ್ಗಿಸಲು ಚೀನಾದೊಂದಿಗೆ ಒಪ್ಪಂದಕ್ಕೆ ಬರಲಾಯಿತು’’ ಎಂದು ಅವರು ತಿಳಿಸಿದರು.
ಈ ಒಪ್ಪಂದದ ಅನುಸಾರ, ಚೀನಾದಿಂದ ಆಮದು ಮಾಡಿಕೊಳ್ಳುವ ಹೆಚ್ಚಿನ ವಸ್ತುಗಳ ಮೇಲಿನ ಒಟ್ಟು 145 ಶೇಕಡ ಸುಂಕವನ್ನು ಮೇ 14ರ ವೇಳೆಗೆ ಅಮೆರಿಕವು 30 ಶೇಕಡಕ್ಕೆ ಇಳಿಸುತ್ತದೆ. ಅದೇ ಹೊತ್ತಿಗೆ, ಚೀನಾ ಕೂಡಾ ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಸುಂಕವನ್ನು 125 ಶೇಕಡದಿಂದ 10 ಶೇಕಡಕ್ಕೆ ತಗ್ಗಿಸುತ್ತದೆ ಎಂದು ಜಿನೇವದಲ್ಲಿ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
‘‘ಫೆಂಟಾನಿಲ್ ವಿಷಯದಲ್ಲಿ ಮುಂದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಾವು ರಚನಾತ್ಮಕ ಮಾತುಕತೆಗಳನ್ನು ನಡೆಸಿದೆವು. ಯಾವುದೇ ಪಕ್ಷವು ಪ್ರಕ್ರಿಯೆಯಿಂದ ಹಿಂದೆ ಸರಿಯಬಾರದು ಎಂಬ ಬಗ್ಗೆ ಎರಡು ದೇಶಗಳ ನಡುವೆ ಸಮ್ಮತಿ ಏರ್ಪಟ್ಟಿದೆ’’ ಎಂದು ಬೆಸಂಟ್ ತಿಳಿಸಿದರು.
‘‘ಹಣಕಾಸು ಮತ್ತು ವ್ಯಾಪಾರ ಸಂಬಂಧಗಳ ಕುರಿತ ಚರ್ಚೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ವ್ಯವಸ್ಥೆಯೊಂದನ್ನು ರೂಪಿಸಲು ಅಮೆರಿಕ ಮತ್ತು ಚೀನಾ ನಿರ್ಧರಿಸಿವೆ’’ ಎಂಬುದಾಗಿಯೂ ಹೇಳಿಕೆ ತಿಳಿಸಿದೆ.
ಈ ಘೋಷಣೆಯು, ಎರಡು ದೇಶಗಳ ನಡುವಿನ ಸುಂಕ ಸಮರವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಇಡಲಾಗಿರುವ ಮೊದಲ ಹೆಜ್ಜೆಯಾಗಿದೆ. ಸುಂಕ ಸಮರದಿಂದಾಗಿ ಆ ದೇಶಗಳ ನಡುವಿನ ವ್ಯಾಪಾರವು ತೀವ್ರವಾಗಿ ಕುಸಿದಿತ್ತು.
---------







