ನೇರ ಮಿಲಿಟರಿ ಸಂವಹನ ವ್ಯವಸ್ಥೆಗಳನ್ನು ಸ್ಥಾಪಿಸಲು ಅಮೆರಿಕ ಮತ್ತು ಚೀನಾ ಸಹಮತ : ರಕ್ಷಣಾ ಸಚಿವ ಪೀಟ್ ಹ್ಯಾಗ್ಸೆತ್

ಯುಎಸ್ ರಕ್ಷಣಾ ಸಚಿವ ಪೀಟ್ ಹ್ಯಾಗ್ಸೆತ್ | Photo Credit : NDTV
ವಾಷಿಂಗ್ಟನ್,ನ.2: ಅಮೆರಿಕ ಮತ್ತು ಚೀನಾ ಉಭಯ ದೇಶಗಳ ಸೇನೆಗಳ ನಡುವೆ ನೇರ ಸಂವಹನ ವ್ಯವಸ್ಥೆಗಳನ್ನು ಸ್ಥಾಪಿಸಲಿವೆ ಎಂದು ಯುಎಸ್ ರಕ್ಷಣಾ ಸಚಿವ ಪೀಟ್ ಹ್ಯಾಗ್ಸೆತ್ ಅವರು ರವಿವಾರ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹಿಂದೆಂದಿಗೂ ಉತ್ತಮವಾಗಿರಲಿಲ್ಲ ಎಂದೂ ಅವರು ಹೇಳಿದ್ದಾರೆ.
ಶನಿವಾರ ಪ್ರಾದೇಶಿಕ ಭದ್ರತಾ ಸಭೆಯ ನೇಪಥ್ಯದಲ್ಲಿ ತಾನು ಚೀನಾದ ವಿದೇಶಾಂಗ ಸಚಿವ ಅಡ್ಮಿರಲ್ ಡಾಂಗ್ ಜುನ್ ಅವರೊಂದಿಗೆ ಮಾತನಾಡಿದ್ದು, ಉಭಯ ದೇಶಗಳಿಗೆ ಶಾಂತಿ, ಸ್ಥಿರತೆ ಮತ್ತು ಒಳ್ಳೆಯ ಸಂಬಂಧಗಳು ಉತ್ತಮ ಮಾರ್ಗವಾಗಿದೆ ಎಂದು ತಾವು ಒಪ್ಪಿಕೊಂಡಿದ್ದೇವೆ ಎಂದು ಹ್ಯಾಗ್ಸೆತ್ ತಿಳಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹೆಚ್ಚುತ್ತಿರುವ ‘ಅಸ್ಥಿರಗೊಳಿಸುವ’ ಕ್ರಮಗಳನ್ನು ಎದುರಿಸಲು ಆಗ್ನೇಯ ಏಷ್ಯಾದ ದೇಶಗಳು ದೃಢವಾದ ನಿಲುವನ್ನು ತಳೆಯಬೇಕು ಮತ್ತು ತಮ್ಮ ಕಡಲ ಪಡೆಗಳನ್ನು ಬಲಗೊಳಿಸಬೇಕು ಎಂದು ಹ್ಯಾಗ್ಸೆತ್ ಒತ್ತಾಯಿಸಿದ ಕೆಲವೇ ಗಂಟೆಗಳ ಬಳಿಕ ಎಕ್ಸ್ನಲ್ಲಿ ಈ ಹೇಳಿಕೆಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.
ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರತಿಪಾದಿಸುತ್ತಿರುವ ವ್ಯಾಪಕ ಪ್ರಾದೇಶಿಕ ಮತ್ತು ಸಾಗರ ಹಕ್ಕುಗಳು ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸುವ ಅದರ ಬದ್ಧತೆಗಳಿಗೆ ವಿರುದ್ಧವಾಗಿವೆ ಎಂದು ಶನಿವಾರ ಆಗ್ನೇಯ ಏಷ್ಯಾ ದೇಶಗಳ ಸಂಘದ ವಿದೇಶಾಂಗ ಸಚಿವರ ಸಭೆಯಲ್ಲಿ ಹೇಳಿದರು.
‘ನಾವು ಶಾಂತಿಯನ್ನು ಬಯಸುತ್ತೇವೆ, ಸಂಘರ್ಷವನ್ನಲ್ಲ. ಆದರೆ ಚೀನಾ ನಿಮ್ಮ ಅಥವಾ ಇತರರ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿಲ್ಲ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ’ ಎಂದರು.
ದಕ್ಷಿಣ ಚೀನಾ ಸಮುದ್ರವು ಏಷ್ಯಾದಲ್ಲಿ ಅತ್ಯಂತ ಉದ್ವಿಗ್ನತೆಯ ತಾಣಗಳಲ್ಲಿ ಒಂದಾಗಿದೆ. ಇಡೀ ಪ್ರದೇಶ ತನ್ನದೆಂದು ಚೀನಾ ಹೇಳಿಕೊಳ್ಳುತ್ತಿದ್ದರೆ ಆಸಿಯಾನ್ ಸದಸ್ಯ ದೇಶಗಳಾದ ಫಿಲಿಪ್ಪೀನ್ಸ್, ವಿಯೆಟ್ನಾಂ, ಮಲೇಷಿಯಾ ಮತ್ತು ಬ್ರೂನಿ ಕೂಡ ಕರಾವಳಿ ಪ್ರದೇಶಗಳು ಮತ್ತು ವೈಶಿಷ್ಟ್ಯಗಳ ಮೇಲೆ ಒಡೆತನವನ್ನು ಪ್ರತಿಪಾದಿಸುತ್ತಿವೆ. ಅಮೆರಿಕದ ಪ್ರಮುಖ ಮಿತ್ರದೇಶವಾಗಿರುವ ಫಿಲಿಪ್ಪೀನ್ಸ್ ಮತ್ತು ಚೀನಾದ ನೌಕಾಪಡೆಯ ನಡುವೆ ಆಗಾಗ್ಗೆ ಘರ್ಷಣೆಗಳೂ ನಡೆದಿವೆ.
‘ನಾನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೂ ಮಾತನಾಡಿದ್ದೇನೆ ಮತ್ತು ಅಮೆರಿಕ ಹಾಗೂ ಚೀನಾ ನಡುವಿನ ಸಂಬಂಧ ಎಂದಿಗೂ ಉತ್ತಮವಾಗಿರಲಿಲ್ಲ ಎನ್ನುವುದನ್ನು ನಾವು ಒಪ್ಪಿಕೊಂಡಿದ್ದೇವೆ ’ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ಹ್ಯಾಗ್ಸೆತ್, ಈ ವಾರದ ಆರಂಭದಲ್ಲಿ ದಕ್ಷಿಣ ಕೊರಿಯಾದಲ್ಲಿ ಚೀನಿ ನಾಯಕ ಕ್ಸಿ ಜಿನ್ಪಿಂಗ್ ಅವರೊಂದಿಗೆ ಟ್ರಂಪ್ ಭೇಟಿಯು ಉಭಯ ದೇಶಗಳ ನಡುವೆ ಶಾಶ್ವತ ಶಾಂತಿ ಮತ್ತು ಯಶಸ್ಸಿಗೆ ನಾಂದಿ ಹಾಡಿದೆ ಎಂದು ತಿಳಿಸಿದ್ದಾರೆ.







