2026 US Midterm Election | ‘ಅಮೆರಿಕದ ಜನರು ಸ್ಪಷ್ಟ ಸಂದೇಶ ನೀಡಿದ್ದಾರೆ’: ಒಬಾಮಾ
"ವಿಭಜನೆಯ ರಾಜಕೀಯಕ್ಕೆ ಜನರ ಒಲವಿಲ್ಲ"

ಬರಾಕ್ ಒಬಾಮಾ (Photo: PTI)
ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ದೇಶದಾದ್ಯಂತ ಸಾಧಿಸಿರುವ ಗೆಲುವಿಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯ ಮೂಲಕ ಅಮೆರಿಕದ ಜನರು ತಮಗೆ ಯಾವ ರೀತಿಯ ರಾಜಕೀಯ ಮತ್ತು ನಾಯಕತ್ವ ಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಜನರನ್ನು ವಿಭಜಿಸುವ ಬದಲು ಒಗ್ಗೂಡಿಸುವ ರಾಜಕೀಯವನ್ನು ಅಮೆರಿಕದ ಜನರು ಬಯಸುತ್ತಿದ್ದಾರೆ. ತಮ್ಮ ಸಮಸ್ಯೆಗಳಿಗೆ ಸ್ಪಷ್ಟ ಹಾಗೂ ಪರಿಣಾಮಕಾರಿ ಪರಿಹಾರಗಳನ್ನು ನೀಡಬಲ್ಲ ನಾಯಕರ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಜನರು ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ’ ಎಂದು ಒಬಾಮಾ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಒಂದು ಕಾಲದಲ್ಲಿ ಗೆಲ್ಲುವುದು ಅಸಾಧ್ಯವೆಂದೇ ಪರಿಗಣಿಸಲಾಗಿದ್ದ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿಯುವ ಧೈರ್ಯ ತೋರಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಆಡಳಿತದ ಅವಧಿ ಮುಗಿಯಲು ಇನ್ನೂ ಎರಡು ವರ್ಷಗಳು ಬಾಕಿ ಇವೆ ಎಂದು ಉಲ್ಲೇಖಿಸಿರುವ ಒಬಾಮಾ, ಈ ಅವಧಿಯನ್ನು ಮಹತ್ವದ ಜವಾಬ್ದಾರಿಯ ಕಾಲವೆಂದು ಬಣ್ಣಿಸಿದ್ದಾರೆ.
‘ಈಗ ನಮ್ಮ ಮುಂದಿರುವ ಕೆಲಸ ಕಠಿಣ ಪರಿಶ್ರಮಕ್ಕೆ ಸಿದ್ಧರಾಗುವುದು, ದೇಶಕ್ಕೆ ಮತ್ತಷ್ಟು ಹಾನಿಯಾಗುವುದನ್ನು ತಡೆಯುವುದು ಮತ್ತು ಭವಿಷ್ಯಕ್ಕಾಗಿ ಭದ್ರ ಬುನಾದಿ ಹಾಕುವುದು’ ಎಂದು ಅವರು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.






