ಟ್ರಂಪ್ ಸುಂಕ ನೀತಿಗೆ ತಡೆ ವಿಧಿಸಿದ ಅಮೆರಿಕ ನ್ಯಾಯಾಲಯ

Photo | PTI
ವಾಷಿಂಗ್ಟನ್ : ಬುಧವಾರ ಅಮೆರಿಕದ ಫೆಡರಲ್ ನ್ಯಾಯಾಲಯ ತುರ್ತು ಅಧಿಕಾರ ಕಾನೂನಿನಡಿಯಲ್ಲಿ ಆಮದುಗಳ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಡೆ ವಿಧಿಸಿದೆ.
ಟ್ರಂಪ್ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಮತ್ತು ದೇಶದ ವ್ಯಾಪಾರ ನೀತಿಯನ್ನು ಅವರಿಗೆ ಬೇಕಾದಂತೆ ಬದಲಾಯಿಸಿದ್ದಾರೆ ಎಂದು ಆರೋಪಿಸಿ ಹಲವಾರು ಮೊಕದ್ದಮೆಗಳು ಸಲ್ಲಿಕೆ ಬಳಿಕ ಯುಎಸ್ ಕೋರ್ಟ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ನ ಮೂವರು ನ್ಯಾಯಾಧೀಶರ ಸಮಿತಿ ಈ ತಡೆಯನ್ನು ವಿಧಿಸಿದೆ.
ಇದಲ್ಲದೆ ಟ್ರಂಪ್ ಆಡಳಿತ ಚೀನಾ, ಮೆಕ್ಸಿಕೊ ಮತ್ತು ಕೆನಡಾದ ಮೇಲೆ ವಿಧಿಸಿದ ಪ್ರತ್ಯೇಕ ಸುಂಕಗಳಿಗೆ ತಡೆಹಿಡಿದಿದೆ.
ಟ್ರಂಪ್ ಆಡಳಿತವು ಸುಂಕ ವಿಧಿಸುವ ಅಧಿಕಾರವನ್ನು ಎತ್ತಿಹಿಡಿಯುವಂತೆ ನ್ಯಾಯಾಲಯವನ್ನು ಒತ್ತಾಯಿಸಿತು. ಈ ಕಾನೂನು ಹಿನ್ನೆಡೆಯು ಚೀನಾದೊಂದಿಗಿನ ವ್ಯಾಪಾರ ಒಪ್ಪಂದದ ಹಾದಿಯನ್ನು ಬದಲಾಯಿಸಬಹುದು ಮತ್ತು ಭಾರತ-ಪಾಕ್ ಸಂಘರ್ಷ ಮತ್ತೆ ಉದ್ಭವಿಸಲು ಕಾರಣವಾಗಬಹುದು ಎಂದು ವಾದಿಸಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮದಲ್ಲಿ ಮಧ್ಯಸ್ಥಿಕೆ ವಹಿಸಲು ಟ್ರಂಪ್ ತಮ್ಮ ಸುಂಕದ ಅಧಿಕಾರವನ್ನು ಬಳಸಿದ್ದಾರೆ ಎಂದು ಅಮೆರಿಕ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಆದರೆ, ಈ ಎಲ್ಲಾ ವಾದಗಳನ್ನು ತಿರಸ್ಕರಿಸಿದ ಅಮೆರಿಕದ ನ್ಯಾಯಾಲಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಗತ್ಯ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಮಾತ್ರ ಅಧ್ಯಕ್ಷರಿಗೆ ಅಧಿಕಾರವಿದೆ ಎಂದು ಹೇಳಿದೆ.
ತೀರ್ಪು ಬಂದ ಕೆಲವೇ ನಿಮಿಷಗಳಲ್ಲಿ ಟ್ರಂಪ್ ಆಡಳಿತ ಈ ಬಗ್ಗೆ ಮೇಲ್ಮನವಿ ಸಲ್ಲಿಸಿದೆ.







