ಇರಾನ್ ನಿಂದ ಅಮೆರಿಕ ವಿಮಾನ ಪತನ: ವರದಿಯನ್ನು ತಳ್ಳಿಹಾಕಿದ ಅಮೆರಿಕ

Photo Credit : AP , PTI
ಹೊಸದಿಲ್ಲಿ, ಮೇ 29: ಇರಾನ್ ನ ಬುಶೆಹರ್ ಪ್ರಾಂತ್ಯದಲ್ಲಿ ಅಮೆರಿಕದ ವಿಮಾನವೊಂದನ್ನು ಹೊಡೆದುರುಳಿಸಲಾಗಿದೆ ಎಂಬ ವರದಿಗಳನ್ನು ಅಮೆರಿಕ ಅಲ್ಲಗಳೆದಿದೆ.
ಶುಕ್ರವಾರ ನಸುಕಿನಲ್ಲಿ ಬುಶೆಹರ್ ಪ್ರಾಂತ್ಯದ ಜಾಮ್ ಪ್ರದೇಶದಲ್ಲಿ ಶತ್ರು ವಿಮಾನವೊಂದನ್ನು ಅಡ್ಡಗಟ್ಟಿ ಹೊಡೆದುರುಳಿಸಲಾಗಿದೆ ಎಂದು ಇರಾನಿ ಮಾಧ್ಯಮವೊಂದು ವರದಿ ಮಾಡಿತ್ತು. ಇರಾನ್ನ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಅಮೆರಿಕದ ವಿಮಾನವನ್ನು ಗುರಿಯಿರಿಸಿದೆ ಎಂದು ವರದಿ ಹೇಳಿತ್ತು.
ಆದರೆ ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಅದನ್ನು ತಳ್ಳಿಹಾಕಿದೆ. ‘‘ಅಮೆರಿಕದ ಯಾವುದೇ ವಿಮಾನವನ್ನು ಹೊಡೆದುರುಳಿಸಲಾಗಿಲ್ಲ’’ ಎಂದು ಅದು ಹೇಳಿದೆ.
ಈ ಮಧ್ಯೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್, ಗುರುವಾರ ನೀಡಿದ ಹೇಳಿಕೆಯಲ್ಲಿ, ಇರಾನ್ ಜೊತೆಗಿನ ಶಾಂತಿ ಮಾತುಕತೆಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇತ್ಯರ್ಥಕ್ಕೆ ಬರಲಾಗದೆ ಇರುವ ಒಂದೆರಡು ವಿಷಯಗಳ ಕುರಿತ ಕಳವಳಗಳು ಬಗೆಹರಿದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಒಪ್ಪಂದಕ್ಕೆ ಅಂತಿಮ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಇರಾನ್ ಜೊತೆಗೆ ಇನ್ನೂ ಅಂತಿಮ ಒಪ್ಪಂದ ಏರ್ಪಟ್ಟಿಲ್ಲ. ಈ ಕುರಿತ ಮಾತುಕತೆಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯೂ ಇದೆ ಎಂದು ವಾನ್ಸ್ ಎಚ್ಚರಿಸಿದ್ದಾರೆ.






