ಮಧ್ಯಪ್ರಾಚ್ಯಕ್ಕೆ 20ಕ್ಕೂ ಹೆಚ್ಚು ಯುದ್ಧನೌಕೆ ನಿಯೋಜಿಸಿದ ಅಮೆರಿಕ

ಸಾಂದರ್ಭಿಕ ಚಿತ್ರ (AP)
ವಾಶಿಂಗ್ಟನ್, ಆ.10: ಇರಾನ್ ಮೇಲಿನ ದಿಗ್ಬಂಧನವನ್ನು ಬಿಗಿಗೊಳಿಸಲು ಅಮೆರಿಕವು ಮಧ್ಯಪ್ರಾಚ್ಯಕ್ಕೆ 20ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) `ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಹಾರ್ಮುಝ್ ಜಲಸಂಧಿಯ ಸುತ್ತಲೂ ಉದ್ವಿಗ್ನತೆ ಹೆಚ್ಚಾಗಿರುವ ಬೆನ್ನಲ್ಲೇ ಈ ನಿಯೋಜನೆ ನಡೆದಿದೆ. ವಾಣಿಜ್ಯ ಹಡಗುಗಳ ಸಂಚಾರಕ್ಕೆ ಈ ಆಯಕಟ್ಟಿನ ಜಲಮಾರ್ಗವನ್ನು ಮತ್ತೆ ಮುಕ್ತಗೊಳಿಸುವ ಮೊದಲು ತನ್ನ ಬೇಡಿಕೆಗಳನ್ನು ಈಡೇರಿಸಬೇಕೆಂದು ಇರಾನ್ ಪಟ್ಟು ಹಿಡಿದಿದೆ. ಈ ಪ್ರದೇಶದಲ್ಲಿ ನಿಯೋಜಿಸಲಾದ ಪಡೆಗಳಲ್ಲಿ ಅಮೆರಿಕ ನೌಕಾಪಡೆಯ ಯುದ್ಧನೌಕೆ `ಯುಎಸ್ಎಸ್ ರೋಸ್' ಕೂಡ ಸೇರಿದೆ ಎಂದು `ಸೆಂಟ್ಕಾಮ್' ತಿಳಿಸಿದೆ.
ಇರಾನ್ ವಿರುದ್ಧದ ಅಮೆರಿಕದ ದಿಗ್ಬಂಧನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಮಿಲಿಟರಿ ಕಾರ್ಯಾಚರಣೆಗಳಿಗೆ ಈ ಯುದ್ಧನೌಕೆಗಳು ಬೆಂಬಲ ನೀಡುತ್ತಿವೆ. ಆಗಸ್ಟ್ 9 ರವರೆಗೆ 55 ವಾಣಿಜ್ಯ ಹಡಗುಗಳ ಮಾರ್ಗವನ್ನು ಬದಲಾಯಿಸಿದೆ, 2 ಹಡಗುಗಳನ್ನು ನಿಷ್ಕ್ರಿಯಗೊಳಿಸಿದೆ ಮತ್ತು 2 ಹಡಗುಗಳನ್ನು ತಪಾಸಣೆಗೊಳಪಡಿಸಿದೆ' ಎಂದು ಹೇಳಿಕೆ ತಿಳಿಸಿದೆ.
ವಾಣಿಜ್ಯ ಹಡಗುಗಳ ಸಂಚಾರವನ್ನು ಯಾವುದೇ ಅಡೆತಡೆಗಳಿಲ್ಲದೆ ಪುನರಾರಂಭಿಸುವ ಒಪ್ಪಂದ ಘೋಷಣೆಯಾದ ತಕ್ಷಣ, ಅಮೆರಿಕವು ಇರಾನ್ ಬಂದರುಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸಲಿದೆ. ಇರಾನ್ ತನ್ನ ಭರವಸೆಗಳನ್ನು ಈಡೇರಿಸುವುದಕ್ಕೆ ತಕ್ಕಂತೆ ಅಮೆರಿಕದ ಕ್ರಮಗಳು ಇರಲಿವೆ ಎಂದು ಅಮೆರಿಕದ ಅಧಿಕಾರಿಯನ್ನು ಉಲ್ಲೇಖಿಸಿ `ರಾಯಿಟರ್ಸ್' ವರದಿ ಮಾಡಿದೆ.






