ಅಮೆರಿಕದಿಂದ ಭಾರತದ ಅಕ್ರಮ ವಲಸಿಗರನ್ನು ಮಿಲಿಟರಿ ವಿಮಾನದಲ್ಲಿ ವಾಪಸು ಕಳುಹಿಸುವ ಪ್ರಕ್ರಿಯೆ ಆರಂಭ

ಸಾಂದರ್ಭಿಕ ಚಿತ್ರ
ಸೋಮವಾರ: ಅಮೆರಿಕದಿಂದ ಭಾರತದ ಅಕ್ರಮ ವಲಸಿಗರನ್ನು ಮಿಲಿಟರಿ C-17 ವಿಮಾನದ ಮೂಲಕ ವಾಪಸು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆಯೆಂದು ಅಮೆರಿಕದ ಅಧಿಕಾರಿ ತಿಳಿಸಿದ್ದಾರೆಂದು ವರದಿಯಾಗಿದೆ. ಈ ವಿಮಾನವು ಭಾರತಕ್ಕೆ ತಲುಪಲು ಸುಮಾರು 24 ಗಂಟೆಗಳಾಗುತ್ತದೆ.
ಜನವರಿ 20ಕ್ಕೆ ಟ್ರಂಪ್ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಇಲ್ಲಿಯವರೆಗೂ ಪೆರು, ಹೊಂಡುರಸ್, ಕೊಲಂಬಿಯ, ಗ್ವಾಟೆಮಾಲ ಹಾಗೂ ಇನ್ನಿತರ ದಕ್ಷಿಣ ಅಮೆರಿಕ ಖಂಡದ ದೇಶಗಳಿಗೆ ಇಲ್ಲಿಯವರೆಗೂ ಸಾವಿರಾರು ಮಂದಿ ಅಕ್ರಮ ವಲಸಿಗರನ್ನು ಮಿಲಿಟರಿ ವಿಮಾನಗಳ ಮೂಲಕ ವಾಪಸು ಕಳುಹಿಸಲಾಗಿದೆ. ಅಕ್ರಮ ವಲಸಿಗರನ್ನು ಅಮೆರಿಕದಿಂದ ಹಿಂದಿರುಗಿಸುವ ಅತಿ ದೂರದ ರಾಷ್ಟ್ರವೆಂದರೆ ಭಾರತ.
Reuters ಸುದ್ದಿ ಸಂಸ್ಥೆಯ ವರದಿಯ ಪ್ರಕಾರ ಕಳೆದ ವಾರ ಗ್ವಾಟೆಮಾಲ ದೇಶಕ್ಕೆ ಹಿಂದಿರುಗಿಸಲು ಪ್ರತಿ ಒಬ್ಬ ಅಕ್ರಮ ವಲಸಿಗನ ಮೇಲೆ ಅಮೆರಿಕ ದೇಶವು ತಲಾ $4,675 ವೆಚ್ಚ ಮಾಡಿದೆ.
ಅಮೆರಿಕದಲ್ಲಿ ಅಕ್ರಮ ವಲಸಿಗರ ಸಂಖ್ಯೆಯಲ್ಲಿ ಭಾರತವು ಮೂರನೆ ಸ್ಥಾನದಲ್ಲಿದೆ. ಸುಮಾರು 7 ಲಕ್ಷ 25 ಸಾವಿರ ಭಾರತೀಯರು ಅಮೆರಿಕದಲ್ಲಿ ಅಕ್ರಮ ವಲಸೆಗಾರರಾಗಿದ್ದಾರೆ. ಇದರಲ್ಲಿ ಅತಿ ಹೆಚ್ಚು ಪ್ರಜೆಗಳು ಗುಜರಾತ್ ಮೂಲದವರಾಗಿದ್ದಾರೆ.
ಈಗಾಗಲೆ ಭಾರತ ಸರಕಾರವು ಅಮೆರಿಕ ಸರಕಾರಕ್ಕೆ ತನ್ನ 18,000 ಪ್ರಜೆಗಳನ್ನು ವಾಪಸು ಹಿಂಪಡೆಯುವುದಾಗಿ ಆಶ್ವಾಸನೆ ನೀಡಿದೆ.
ಇಂದು ಪ್ರಾರಂಭವಾಗಿರುವ ಈ ಪ್ರಕ್ರಿಯೆ ಇನ್ನೂ ಹೇಗೆ ಮುಂದುವರಿಯುತ್ತದೆಂದು ಕಾದು ನೋಡಬೇಕಿದೆ. ಫೆಬ್ರವರಿ 2ರಂದು ಅಮೆರಿಕದಾದ್ಯಂತ ಹಲವಾರು ನಗರಗಳಲ್ಲಿ ಅಕ್ರಮ ವಲಸಿಗರನ್ನು ಬಂಧಿಸಿ ವಾಪಸು ಅವರ ದೇಶಗಳಿಗೆ ಕಳುಹಿಸುವ ಟ್ರಂಪ್ ಸರಕಾರದ ಕ್ರಮದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದವು. ಈಗಾಗಲೆ ಹಣದುಬ್ಬರದಿಂದ ಹೆಚ್ಚು ಬೆಲೆ ಎದುರಿಸುತ್ತಿರುವ ಅಮೆರಿಕನ್ ಪ್ರಜೆಗಳು ಅಕ್ರಮ ವಲಸಿಗರು ಹಿಂದಿರುಗಿದರೆ ಇನ್ನೂ ಹೆಚ್ಚು ಬೆಲೆ ತೆರಬೇಕಾಗುತ್ತದೆ. ವ್ಯವಸಾಯ, ಕಟ್ಟಡ ನಿರ್ಮಾಣ, ಕೋಳಿ ಸಾಕಾಣಿಕೆ, ಕಸಾಯಿಖಾನೆ, ಮನೆಗೆಲಸ ಇತ್ಯಾದಿಗಳಿಗೆ ಕೆಲಸಗಾರರ ಕೊರತೆ ಹೆಚ್ಚಾಗುತ್ತದೆ. ಇದರ ಪರಿಣಾಮ ಆರ್ಥಿಕ ಸ್ಥಿತಿಯ ಮೇಲೂ ಆಗಲಿದೆ. ಇದನ್ನು ಟ್ರಂಪ್ ಹೇಗೆ ನಿಭಾಯಿಸುತ್ತಾರೆಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.