ಟ್ರಂಪ್ ಆಡಳಿತದಲ್ಲಿ ‘ಕ್ವಾಡ್’ ಅಳಿವಿನಂಚಿನಲ್ಲಿದೆ ಎಂಬ ವರದಿಗೆ ಅಮೆರಿಕ ತಿರಸ್ಕಾರ

ಡೊನಾಲ್ಡ್ ಟ್ರಂಪ್ | Photo Credit : PTI
ಹೊಸದಿಲ್ಲಿ: ಯುಎಸ್, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ನಡುವಿನ ‘ಕ್ವಾಡ್’ ಮೈತ್ರಿಕೂಟವು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ದುರ್ಬಲಗೊಳ್ಳುತ್ತಿದೆ ಎಂಬ ಮಾಧ್ಯಮ ವರದಿಯನ್ನು ಅಮೆರಿಕವು ತಿರಸ್ಕರಿಸಿದೆ. ವಾಷಿಂಗ್ಟನ್ ಮುಂದಿನ ವಾರ ಮನಿಲಾದಲ್ಲಿ ಕ್ವಾಡ್ ನಾಯಕರ ಶೃಂಗಸಭೆಯನ್ನು ಔಪಚಾರಿಕಗೊಳಿಸಲು ಕೆಲಸ ಮಾಡುತ್ತಿದೆ ಎಂದು ಅದು ತಿಳಿಸಿದೆ.
ಪೊಲಿಟಿಕೋ ಪ್ರಕಟಿಸಿದ್ದ ವರದಿಗೆ ಪ್ರತಿಕ್ರಿಯಿಸಿರುವ ಅಮೆರಿಕದ ಜಾಗತಿಕ ಸಾರ್ವಜನಿಕ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಡೈಲನ್ ಜಾನ್ಸನ್ ಅವರು, ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರು ಕ್ವಾಡ್ ದೇಶಗಳ ತನ್ನ ಸಹವರ್ತಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ ಮತ್ತು ಅಧಿಕಾರಿಗಳ ನಡುವಿನ ನಿಯಮಿತ ಚರ್ಚೆಗಳು ಮುಂದುವರೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದು ಸಂಪೂರ್ಣವಾಗಿ ಹಾಸ್ಯಾಸ್ಪದ ಹೇಳಿಕೆಯಾಗಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಬಣ್ಣಿಸಿರುವ ಅವರು, ‘ಕಳೆದ ಎರಡು ವರ್ಷಗಳಲ್ಲಿ ರೂಬಿಯೊ ಅವರು ಕ್ವಾಡ್ ವಿದೇಶಾಂಗ ಸಚಿವರೊಂದಿಗೆ ಐದು ಬಾರಿ ಔಪಚಾರಿಕವಾಗಿ ಸಭೆ ನಡೆಸಿದ್ದಾರೆ, ಅದರಲ್ಲಿ ಮೂರು ಸಭೆಗಳು ಕಳೆದ ಆರು ತಿಂಗಳುಗಳಲ್ಲಿ ನಡೆದಿವೆ. ಸಚಿವರು ಅಧಿಕಾರ ಸ್ವೀಕರಿಸಿದ ತಕ್ಷಣದ ಮೊದಲ ಅಧಿಕೃತ ಕರೆಯನ್ನು ಕ್ವಾಡ್ ದೇಶಗಳಿಗೆ ಮಾಡಲಾಗಿತ್ತು. ನಾವು ನಿಯಮಿತವಾಗಿ ಮಾಸಿಕ ಕ್ವಾಡ್ ಕರೆಗಳು ಮತ್ತು ಸಭೆಗಳನ್ನು ನಡೆಸುತ್ತಿದ್ದೇವೆ ಮತ್ತು ಮುಂದಿನ ವಾರ ಆಸಿಯಾನ್ ಶೃಂಗಸಭೆಯಲ್ಲಿ ಕ್ವಾಡ್ ನಾಯಕರ ಶೃಂಗಸಭೆಯನ್ನು ಔಪಚಾರಿಕಗೊಳಿಸಲು ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಅವರು ಖಂಡಿಸಿದ್ದಾರೆ.
ಫಿಲಿಪ್ಪೀನ್ಸ್ ಅಧ್ಯಕ್ಷತೆಯಲ್ಲಿ ನವೆಂಬರ್ 16ರಿಂದ 18ರವರೆಗೆ ಮನಿಲಾದಲ್ಲಿ ನಡೆಯಲಿರುವ ಆಸಿಯಾನ್ ಸಭೆಗಳು ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ (ಇಎಎಸ್) ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗುರುವಾರ ಈ ಬಗ್ಗೆ ಮಾಹಿತಿಯನ್ನು ನೀಡಿದೆಯಾದರೂ, ಮೋದಿಯವರು ಟ್ರಂಪ್ ಅವರನ್ನು ಭೇಟಿಯಾಗುತ್ತಾರೆಯೇ ಅಥವಾ ಕ್ವಾಡ್ ನಾಯಕರು ಪ್ರತ್ಯೇಕ ಸಭೆ ನಡೆಸುತ್ತಾರೆಯೇ ಎನ್ನುವುದನ್ನು ದೃಢಪಡಿಸಿಲ್ಲ.
ವಿಶೇಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ (ಪೂರ್ವ) ರುದ್ರೇಂದ್ರ ಟಂಡನ್, ‘ಇದು ಕ್ಷಿಪ್ರವಾಗಿ ಸಜ್ಜಾಗುತ್ತಿರುವ ಕಾರ್ಯಕ್ರಮವಾಗಿದೆ ಮತ್ತು ಪ್ರಧಾನಿಯವರು ಆಸಿಯಾನ್ ಸಭೆಗೆ ಹಾಜರಾಗುತ್ತಿದ್ದಾರೆ ಎನ್ನುವುದನ್ನು ಹೊರತುಪಡಿಸಿ ನಮ್ಮ ಬಳಿ ಈಗ ಯಾವುದೇ ಮಾಹಿತಿ ಇಲ್ಲ’ ಎಂದು ತಿಳಿಸಿದರು.
ಮನಿಲಾದಲ್ಲಿ ಶೃಂಗಸಭೆ ನಡೆಸಲು ನಾಲ್ಕು ಕ್ವಾಡ್ ದೇಶಗಳು ಒಪ್ಪಿಕೊಂಡಿವೆ ಎಂದು ರೂಬಿಯೊ ಕಳೆದ ತಿಂಗಳು ತಿಳಿಸಿದ್ದರು.
ಫಿಲಿಪ್ಪೀನ್ಸ್ ಸರಕಾರದ ಪ್ರಕಾರ ಶೃಂಗಸಭೆಯಲ್ಲಿ ಚೀನಾದ ಪ್ರಧಾನಿ ಲಿ ಕಿಯಾಂಗ್, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್, ಬ್ರೆಝಿಲ್ ಅಧ್ಯಕ್ಷ ಲುಯಿಝ್ ಇನಾಸಿಯೊ ಲುಲಾ ಡಾ ಸಿಲ್ವಾ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಸೇರಿದಂತೆ ಕನಿಷ್ಠ 19 ನಾಯಕರು ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಭಾರತ ಮತ್ತು ಆಸಿಯಾನ್ ನಡುವಿನ ವ್ಯಾಪಾರ ಸುಮಾರು 122 ಶತಕೋಟಿ ಡಾಲರ್ ಮೌಲ್ಯದ್ದಾಗಿದ್ದು, ವ್ಯಾಪಾರ ಕೊರತೆಗಳನ್ನು ನೀಗಿಸಲು ಆಸಿಯಾನ್-ಭಾರತ ಸರಕುಗಳ ವ್ಯಾಪಾರ ಒಪ್ಪಂದದ ಸಮಗ್ರ ಪರಿಶೀಲನೆಗೆ ಹೊಸದಿಲ್ಲಿಯು ಒತ್ತು ನೀಡುತ್ತಿದೆ.
ಭಾರತ ಮತ್ತು ಫಿಲಿಪ್ಪೀನ್ಸ್ ತಮ್ಮ ರಕ್ಷಣಾ ಸಂಬಂಧಗಳನ್ನು ಬಲಪಡಿಸಿಕೊಂಡಿದ್ದು, ಮನಿಲಾ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸುತ್ತಿದೆ.






