ಇಸ್ರೇಲ್ ವಿರುದ್ಧ ಇರಾನ್ ದಾಳಿಯು ಯುದ್ಧಕ್ಕೆ ಅಮೆರಿಕವನ್ನು ಎಳೆಯುವಷ್ಟು ಗಂಭೀರವಾಗಿರದು : ಅಮೆರಿಕ ಹೇಳಿಕೆ
![ಇಸ್ರೇಲ್ ವಿರುದ್ಧ ಇರಾನ್ ದಾಳಿಯು ಯುದ್ಧಕ್ಕೆ ಅಮೆರಿಕವನ್ನು ಎಳೆಯುವಷ್ಟು ಗಂಭೀರವಾಗಿರದು : ಅಮೆರಿಕ ಹೇಳಿಕೆ ಇಸ್ರೇಲ್ ವಿರುದ್ಧ ಇರಾನ್ ದಾಳಿಯು ಯುದ್ಧಕ್ಕೆ ಅಮೆರಿಕವನ್ನು ಎಳೆಯುವಷ್ಟು ಗಂಭೀರವಾಗಿರದು : ಅಮೆರಿಕ ಹೇಳಿಕೆ](https://www.varthabharati.in/h-upload/2024/04/12/1260187-67f5fe06-bd3e-445d-8675-b7b4c06f746c.webp)
Photo : PTI
ವಾಷಿಂಗ್ಟನ್: ಇಸ್ರೇಲ್ ವಿರುದ್ಧ ಇರಾನ್ನ ದಾಳಿಯನ್ನು ನಿರೀಕ್ಷಿಸಿದ್ದೇವೆ. ಆದರೆ ಈ ದಾಳಿಯು ಅಮೆರಿಕವನ್ನೂ ಯುದ್ಧಕ್ಕೆ ಎಳೆಯುವಷ್ಟು ಗಂಭೀರವಾಗಿರದು ಎಂದು ನಿರೀಕ್ಷಿಸುವುದಾಗಿ ಅಮೆರಿಕದ ಶ್ವೇತಭವನ ಹೇಳಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹರಡುವುದನ್ನು ಅಮೆರಿಕ ಬಯಸುವುದಿಲ್ಲ ಎಂದು ಅಮೆರಿಕ ಪುನರುಚ್ಚರಿಸಿದೆ. ಸಿರಿಯಾ ರಾಜಧಾನಿ ದಮಾಸ್ಕಸ್ನಲ್ಲಿ ಇರಾನ್ ದೂತಾವಾಸದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಅಮೆರಿಕ ಒಳಗೊಂಡಿಲ್ಲ. ಆದರೆ ಈ ದಾಳಿಯನ್ನು ನೆಪವಾಗಿಸಿ ವಲಯದಲ್ಲಿನ ಬಿಕ್ಕಟ್ಟನ್ನು ಪ್ರಚೋದಿಸಬಾರದು ಎಂದು ಇರಾನ್ಗೆ ಎಚ್ಚರಿಕೆ ನೀಡಿರುವುದಾಗಿ ಶ್ವೇತಭವನದ ಮೂಲಗಳು ಹೇಳಿವೆ.
ಎಪ್ರಿಲ್ 1ರಂದು ದಮಾಸ್ಕಸ್ನಲ್ಲಿ ಇರಾನ್ ದೂತಾವಾಸದ ಮೇಲೆ ನಡೆದ ದಾಳಿಗೆ ಇಸ್ರೇಲ್ ಹೊಣೆಯಾಗಿದೆ ಮತ್ತು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಘೋಷಿಸಿದೆ. ಈ ದಾಳಿಯಲ್ಲಿ ಉನ್ನತ ಕಮಾಂಡರ್ ಸೇರಿದಂತೆ ಇರಾನ್ನ 7 ಮಿಲಿಟರಿ ಅಧಿಕಾರಿಗಳು ಹತರಾಗಿದ್ದರು.
ತರಾತುರಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಮತ್ತು ಸಂಘರ್ಷಕ್ಕೆ ಪ್ರಚೋದನೆ ನೀಡುವ ರೀತಿಯಲ್ಲಿ ವರ್ತಿಸುವುದಿಲ್ಲ. ಆದರೆ ಪ್ರತೀಕಾರ ಕ್ರಮ ಕೈಗೊಳ್ಳುವುದು ಖಚಿತ ಎಂದು ಇರಾನ್ ಅಮೆರಿಕಕ್ಕೆ ಸ್ಪಷ್ಟಪಡಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಇರಾನ್ನ ಸಂಭಾವ್ಯ ಪ್ರತಿದಾಳಿಯ ಬಗ್ಗೆ ಅಮೆರಿಕ ಕಟ್ಟೆಚ್ಚರ ವಹಿಸಿದೆ ಮತ್ತು ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ವರದಿ ಹೇಳಿದೆ.