ಟ್ರಂಪ್ ಆಪ್ತ ವಕೀಲರ ನಿಯೋಜನೆ ಬಳಿಕ ಅದಾನಿ ವಿರುದ್ಧದ ವಂಚನೆ ಆರೋಪ ಕೈಬಿಟ್ಟ ಅಮೆರಿಕ!

ಗೌತಮ್ ಅದಾನಿ PC : PTI
ವಾಷಿಂಗ್ಟನ್: ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧದ ವಂಚನೆ ಆರೋಪವನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಕೈಬಿಟ್ಟಿದೆ. ಡೊನಾಲ್ಡ್ ಟ್ರಂಪ್ ಅವರ ಆಪ್ತ ವಕೀಲರ ನೇತೃತ್ವದ ಕಾನೂನು ತಂಡವನ್ನು ಅದಾನಿ ಸೇವೆಗೆ ನಿಯೋಜಿಸಿಕೊಂಡ ಬಳಿಕ ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.
ಅದಾನಿ ವಿರುದ್ಧದ ವಂಚನೆ ಅರೋಪದ ತನಿಖೆಯನ್ನು ಕೈಬಿಟ್ಟರೆ ಅವರು ಅಮೆರಿಕದ ಆರ್ಥಿಕತೆಯಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಾರೆ ಹಾಗಾಗಿ ಇದರಿಂದ 15 ಸಾವಿರ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ಏಪ್ರಿಲ್ ನಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಅವರ ವೈಯಕ್ತಿಕ ವಕೀಲ ರಾಬರ್ಟ್ ಜೆ ಗ್ಯೂಫ್ರಾ ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ಹಾಗೂ ಬ್ಲೂಮ್ಬರ್ಗ್ ವರದಿ ಮಾಡಿವೆ.
ಆರೋಪ ಸಾಬೀತುಪಡಿಸಲು ಮತ್ತು ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಅಭಿಯೋಜಕರಿಗೆ ಹೇಗೆ ಪುರಾವೆಯ ಕೊರತೆ ಇದೆ ಎನ್ನುವುದನ್ನು ಗ್ಯೂಫ್ರಾ 100ಕ್ಕೂ ಹೆಚ್ಚು ಸ್ಲೈಡ್ ಪ್ರಸ್ತುತಿಯ ಮೂಲಕ ಪ್ರತಿಪಾದಿಸಿದರು ಎಂದು ತಿಳಿದುಬಂದಿದೆ. ಆದರೆ ಸಂಭಾವ್ಯ ಹೂಡಿಕೆಯಿಂದ ಪ್ರಕರಣದ ಪರಿಣಾಮವನ್ನು ಸರಿಪಡಿಸಲಾಗದು ಎಂದು ಅಭಿಯೋಜಕರು ವಾದಿಸಿದರೂ, ನ್ಯಾಯಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರಿಂದ ಈ ಪ್ರಸ್ತಾವಕ್ಕೆ ಪೂರಕ ಸ್ಪಂದನೆ ದೊರಕಿತು ಎಂದು ನ್ಯೂಯಾರ್ಕ್ ಟೈಮ್ಸ್ ಸ್ಪಷ್ಟಪಡಿಸಿದೆ.
ಭಾರತ ಸರ್ಕಾರಕ್ಕೆ 250 ದಶಲಕ್ಷ ಡಾಲರ್ ಪಾವತಿಸಿ ಅಮೆರಿಕ ಹಾಗೂ ಅಂತರರಾಷ್ಟ್ರೀಯ ಹೂಡಿಕೆದಾರರನ್ನು ವಂಚಿಸಲು ಸುಳ್ಳು ಹೇಳಿಕೆ ನೀಡಿ ಸಂಚು ರೂಪಿಸಿದ ಆರೋಪವನ್ನು ಅದಾನಿ ಎದುರಿಸುತ್ತಿದ್ದಾರೆ. ಭಾರತದ ನವೀಕರಿಸಬಹುದಾದ ಇಂಧನ ಕಂಪನಿಗಳ ಇಬ್ಬರು ಉನ್ನತ ಅಧಿಕಾರಿಗಳು ಮತ್ತು ಅದಾನಿ ವಿರುದ್ಧ 2024ರ ನವೆಂಬರ್ನಲ್ಲಿ ಹಲವು ಆರೋಪಗಳನ್ನು ಮಾಡಲಾಗಿತ್ತು.






