ಅಮೆರಿಕದಲ್ಲಿ ವಲಸಿಗರ ಕೆಲಸದ ಪರವಾನಗಿಯ ಸ್ವಯಂ ನವೀಕರಣ ರದ್ದು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ಹೊಸದಿಲ್ಲಿ: ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ವಲಸೆ ಕಾರ್ಮಿಕರ ಉದ್ಯೋಗಾಧಿಕಾರ ದಾಖಲೆಗಳ (EAD) ಸ್ವಯಂಚಾಲಿತ ನವೀಕರಣ ವ್ಯವಸ್ಥೆಯನ್ನು ರದ್ದುಗೊಳಿಸಿದೆ. ಈ ಕ್ರಮವು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ವಿದೇಶಿ ಉದ್ಯೋಗಿಗಳ ಮೇಲೆ, ವಿಶೇಷವಾಗಿ ಭಾರತೀಯ ವಲಸಿಗರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಹೊಸ ನಿಯಮದ ಪ್ರಕಾರ, ಅಕ್ಟೋಬರ್ 30, 2025 ರಿಂದ ಅಥವಾ ಅದರ ನಂತರ ತಮ್ಮ EAD ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವವರು ಇನ್ನು ಮುಂದೆ ಸ್ವಯಂಚಾಲಿತ ವಿಸ್ತರಣೆಗೆ ಅರ್ಹರಾಗಿರುವುದಿಲ್ಲ. ಆದರೆ ಅಕ್ಟೋಬರ್ 30ರ ಮೊದಲು ಸಲ್ಲಿಸಿದ ಅರ್ಜಿಗಳಿಗೆ ಹಿಂದಿನಂತೆಯೇ ವಿಸ್ತರಣೆ ಸಿಗಲಿದೆ ಎಂದು ಇಲಾಖೆ ತಿಳಿಸಿದೆ.
ವಲಸೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಭದ್ರತೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹೇಳಿಕೆ ನೀಡಿದೆ. ಇದರಡಿ ವಲಸಿಗರ ಹಿನ್ನೆಲೆಯ ಪರಿಶೀಲನೆ, ದಾಖಲೆ ಪರಿಶೀಲನೆ ಹಾಗೂ ಸ್ಕ್ರೀನಿಂಗ್ ಪ್ರಕ್ರಿಯೆಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುತ್ತದೆ.
ಬೈಡನ್ ಆಡಳಿತದ ಅವಧಿಯಲ್ಲಿ, ವಲಸಿಗರು ತಮ್ಮ ಕೆಲಸದ ಪರವಾನಗಿ ಅವಧಿ ಮುಗಿದ ಬಳಿಕವೂ 540 ದಿನಗಳವರೆಗೆ ಅಮೆರಿಕಾದಲ್ಲಿ ಕೆಲಸ ಮಾಡಬಹುದಾಗಿತ್ತು. ಸಕಾಲಿಕವಾಗಿ ನವೀಕರಣ ಅರ್ಜಿಯನ್ನು ಸಲ್ಲಿಸಿದರೆ ಈ ಸೌಲಭ್ಯ ಲಭ್ಯವಾಗುತ್ತಿತ್ತು. ಆದರೆ ಈಗಿನ ನಿರ್ಧಾರದಿಂದ ಆ ಸೌಲಭ್ಯ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
“ಅಮೆರಿಕಾದಲ್ಲಿ ಕೆಲಸ ಮಾಡುವುದು ಹಕ್ಕಲ್ಲ, ಅದು ಸವಲತ್ತು,” ಎಂದು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ (USCIS) ನಿರ್ದೇಶಕ ಜೋಸೆಫ್ ಎಡ್ಲೋ ಹೇಳಿದ್ದಾರೆ. ಈ ಕ್ರಮವು “ಸಾಮಾನ್ಯ ವಿವೇಕದ ನಿರ್ಧಾರ” ಎಂದು ಅವರು ಕರೆದಿದ್ದಾರೆ.
USCIS ವಲಸಿಗರಿಗೆ ತಮ್ಮ EAD ನವೀಕರಣ ಅರ್ಜಿಯನ್ನು ಅವಧಿ ಮುಗಿಯುವ 180 ದಿನಗಳ ಮೊದಲು ಸಲ್ಲಿಸಲು ಶಿಫಾರಸು ಮಾಡಿದೆ. ತಡವಾದರೆ ಉದ್ಯೋಗಾಧಿಕಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಬಹುದು ಎಂದು ಎಚ್ಚರಿಸಿದೆ.
ಯಾರಿಗೆ ಅಗತ್ಯ EAD?
EAD (Form I-766) ಎಂದರೆ ಅಮೆರಿಕಾದಲ್ಲಿ ನಿರ್ದಿಷ್ಟ ಅವಧಿಗೆ ಕೆಲಸ ಮಾಡಲು ನೀಡುವ ಅಧಿಕೃತ ಅನುಮತಿ ಪತ್ರ. ಖಾಯಂ ನಿವಾಸಿಗಳು (ಗ್ರೀನ್ ಕಾರ್ಡ್ ಹೊಂದಿರುವವರು) EAD ಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. H-1B, L-1B, O ಅಥವಾ P ವೀಸಾ ಹೊಂದಿರುವ ವಲಸಿಗರಿಗೂ ಈ ದಾಖಲೆ ಅಗತ್ಯವಿಲ್ಲ.
H-1B ವಿವಾದ
ಸೆಪ್ಟೆಂಬರ್ನಲ್ಲಿ ಟ್ರಂಪ್ ಆಡಳಿತವು H-1B ವೀಸಾ ಶುಲ್ಕವನ್ನು 100,000 ಡಾಲರ್ (ಸುಮಾರು 88 ಲಕ್ಷ ರೂಪಾಯಿ) ಕ್ಕೆ ಏರಿಸಿ, ಅಮೆರಿಕದಲ್ಲಿ ಕೇವಲ ಅತ್ಯುನ್ನತ ಕೌಶಲ್ಯ ಹೊಂದಿರುವವರಿಗೆ ಅವಕಾಶ ನೀಡಲಾಗುವುದು ಎಂದು ಘೋಷಿಸಿತ್ತು.
ಇದೇ ವೇಳೆ, ಫ್ಲೋರಿಡಾ ರಾಜ್ಯದ ಗವರ್ನರ್ ರಾನ್ ಡಿಸಾಂಟಿಸ್ ಅಮೆರಿಕದ ವಿಶ್ವವಿದ್ಯಾಲಯಗಳಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಬದಲು ಸ್ಥಳೀಯ ಅಮೆರಿಕನ್ನರನ್ನೇ ಆಯ್ಕೆ ಮಾಡುವಂತೆ ಆದೇಶಿಸಿದ್ದಾರೆ.
ಹೊಸ ನಿಯಮದಿಂದ ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಲಕ್ಷಾಂತರ ಭಾರತೀಯ ವಲಸಿಗರು ನವೀಕರಣ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಕಾನೂನಾತ್ಮಕ ಅಡಚಣೆಗಳನ್ನು ಎದುರಿಸಬೇಕಾಗುವ ಆತಂಕ ವ್ಯಕ್ತವಾಗಿದೆ.







