ರಷ್ಯಾದ ತೈಲ ನಿರ್ಬಂಧಗಳ ಮೇಲಿನ ವಿನಾಯಿತಿ ವಿಸ್ತರಿಸಿದ ಅಮೆರಿಕ

ಸಾಂದರ್ಭಿಕ ಚಿತ್ರ | Photo Credit : magnific
ವಾಶಿಂಗ್ಟನ್, ಮೇ 19: ನಿರ್ಬಂಧಗಳಿಂದ ರಷ್ಯಾದ ಕೆಲವು ತೈಲ ಸಾಗಣೆಗೆ ನೀಡಲಾಗಿದ್ದ ವಿನಾಯಿತಿಯನ್ನು ಒಂದು ತಿಂಗಳು ವಿಸ್ತರಿಸಿರುವುದಾಗಿ ಅಮೆರಿಕದ ಖಜಾನೆ ಇಲಾಖೆಯ ಆದೇಶ ತಿಳಿಸಿದೆ.
ಈ ಕ್ರಮವು ಎಪ್ರಿಲ್ 17 ಅಥವಾ ಅದಕ್ಕೂ ಮುನ್ನ ಸಮುದ್ರ ಮಾರ್ಗದಲ್ಲಿರುವ ರಷ್ಯಾದ ತೈಲವನ್ನು ಒಳಗೊಂಡ ವಹಿವಾಟುಗಳನ್ನು ಜೂನ್ 17ರವರೆಗೆ ಮುಂದುವರಿಸಲು ಅವಕಾಶ ನೀಡುತ್ತದೆ. ಈ ವಿನಾಯಿತಿ ರಷ್ಯಾದ ತೈಲ ಖರೀದಿಸುವ ದೇಶಗಳಿಗೆ ತಾತ್ಕಾಲಿಕ ಪರಿಹಾರ ಒದಗಿಸುತ್ತದೆ. ಇತ್ತೀಚಿನ ವಿಸ್ತರಣೆಯು ಲೈಸೆನ್ಸ್ ವ್ಯಾಪ್ತಿಗೆ ಬರುವ ಖರೀದಿದಾರರು ಅಮೆರಿಕದ ನಿರ್ಬಂಧಗಳ ನಿಯಮವನ್ನು ಉಲ್ಲಂಘಿಸದೆ ಜೂನ್ ಮಧ್ಯದವರೆಗೆ ಅರ್ಹ ರಷ್ಯಾದ ತೈಲ ಸಾಗಣೆಗಳೊಂದಿಗೆ ವ್ಯವಹರಿಸುವುದನ್ನು ಮುಂದುವರಿಸಬಹುದು. ಆದರೆ ಇರಾನ್, ಉತ್ತರ ಕೊರಿಯಾ, ಕ್ಯೂಬಾ ಅಥವಾ ಉಕ್ರೇನ್ ನ ಕೆಲವು ಪ್ರದೇಶಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳು ಒಳಗೊಂಡಿರುವ ವಹಿವಾಟುಗಳಿಗೆ ಅವಕಾಶವಿಲ್ಲ ಎಂದು ಖಜಾನೆ ಇಲಾಖೆ ಸ್ಪಷ್ಟಪಡಿಸಿದೆ.
ರಷ್ಯಾದ ತೈಲವು ಭಾರತ ಸೇರಿದಂತೆ ಹಲವಾರು ದೇಶಗಳಿಗೆ ರಿಯಾಯಿತಿಯ ಕಚ್ಛಾತೈಲದ ಪ್ರಮುಖ ಮೂಲವಾಗಿದೆ.




