ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಪತನಗೊಂಡ ಅಮೆರಿಕ ಯುದ್ಧವಿಮಾನ

Photo: x.com/EricLDaugh
ಕ್ಯಾಲಿಫೋರ್ನಿಯಾ: ಲಾಸ್ ಎಂಜಲೀಸ್ ನ ಉತ್ತರಭಾಗದಲ್ಲಿರುವ ಅಮೆರಿಕ ವಾಯುಪಡೆಯ ಎಡ್ವರ್ಡ್ ಏರ್ಬೇಸ್ ನಲ್ಲಿ ಸೋಮವಾರ ಬೆಳಿಗ್ಗೆ ಅಮೆರಿಕ ಸೇನಾ ವಿಮಾನ ದುರಂತಕ್ಕೀಡಾಗಿದೆ ಎಂದು ಜಾಲತಾಣ ಪೋಸ್ಟ್ ನಲ್ಲಿ ಪ್ರಕಟಿಸಲಾಗಿದೆ.
"ಅಮೆರಿಕದ ವಾಯುಪಡೆಯ ಬಿ-52 ಸ್ಟಾಟೊಫೋರ್ಟೆಸ್ ವಿಮಾನ ಎಡ್ವರ್ಡ್ ವಾಯುಕ್ಷೇತ್ರದಿಂದ ಬೆಳಿಗ್ಗೆ 11.20ಕ್ಕೆ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಅಪಘಾತಕ್ಕೀಡಾಗಿದೆ" ಎಂದು ವಾಯುನೆಲೆ ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದೆ.
"ತುರ್ತು ಸಿಬ್ಬಂದಿ ತಕ್ಷಣವೇ ಸ್ಪಂದಿಸಿದ್ದು, ಸಮರೋಪಾದಿ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಸಿಎನ್ಎನ್ ವರದಿ ಮಾಡಿದೆ. ದುರಂತದಲ್ಲಿ ಸಾವು ನೋವು ಸಂಭವಿಸಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಯಾವುದೇ ಪ್ರಕಟಣೆ ನೀಡಿಲ್ಲ.
ವಿಮಾನದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಅಪಘಾತ ಸ್ಥಳದ ವೈಮಾನಿಕ ವಿಡಿಯೊ ತುಣುಕುಗಳಿಂದ ತಿಳಿದುಬರುತ್ತಿದೆ.
ವಿಮಾನ ಪತನವಾದ ತಕ್ಷಣ ದಟ್ಟ ಹೊಗೆ ವ್ಯಾಪಿಸಿದ್ದಾಗಿ ಪ್ರಸಾರ ಹೆಲಿಕಾಪ್ಟರ್ ನಲ್ಲಿದ್ದ ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ತುರ್ತು ಸ್ಪಂದನೆ ವಾಹನಗಳನ್ನು ನಿಯೋಜಿಸಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಬಿ-52 ಯುದ್ಧವಿಮಾನ ಧೀರ್ಘದೂರ ಸಾಮರ್ಥ್ಯದ ಪ್ರಮುಖ ಬಾಂಬರ್ ಆಗಿದ್ದು, 1950ರ ದಶಕದಿಂದಲೂ ಅಮರಿಕ ಸೇನೆಯ ಸೇವೆಯಲ್ಲಿದೆ. 8800 ಮೈಲು ದೂರದವರೆಗೂ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಅಣ್ವಸ್ತ್ರ ಪೇಲೋಡ್ ಒಯ್ಯುವ ಸಾಮರ್ಥ್ಯ ಹೊಂದಿವೆ. ವಿಯೆಟ್ನಾಂ, ಗಲ್ಫ್ ದೇಶಗಳು, ಇರಾನ್, ಅಫ್ಘಾನಿಸ್ತಾನ ಹಾಗೂ ಇರಾನ್ ವಿರುದ್ಧದ ದಾಳಿಯಲ್ಲಿ ಕೂಡಾ ಅಮೆರಿಕ ಹಲವು ಮಿಲಿಟರಿ ಕಾರ್ಯಾಚರಣೆಗೆ ಇದನ್ನು ಬಳಸಿತ್ತು.






